ಮುಂಬಯಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ 77.18ಕ್ಕೆ ಪತನವಾಯಿತು. ಇದು ಇದುವರೆಗಿನ ಗರಿಷ್ಠ ಕುಸಿತವಾಗಿದ್ದು, ಷೇರು ಪೇಟೆ ತಲ್ಲಣಿಸಿತು.
ಬೆಳಗ್ಗೆ ವಹಿವಾಟು ಆರಂಭಿಸಿದಾಗ ಡಾಲರ್ ಎದುರು 76.95 ರೂ.ನಷ್ಟಿದ್ದ ಮೌಲ್ಯ, ಬಳಿಕ 76.91ಕ್ಕೆ ಕುಸಿಯಿತು.
ಅಮೆರಿಕದ ಫೆಡರಲ್ ರಿಸರ್ವ್ (ನಮ್ಮಲ್ಲಿ ಆರ್‌ಬಿಐ ಇರುವ ಹಾಗೆ) ತನ್ನ ಬಡ್ಡಿ ದರವನ್ನು ಕಳೆದ 22 ವಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಸಿದೆ. ಶೇ.0.75ರಿಂದ ಶೇ.1ಕ್ಕೆ ಹೆಚ್ಚಿಸಿದೆ. ಹೀಗಾಗಿ ಡಾಲರ್‌ನಲ್ಲಿ ಹೂಡಿಕೆಗೆ ಬೇಡಿಕೆ ವೃದ್ಧಿಸಿದೆ.
ರೂಪಾಯಿ ದುರ್ಬಲವಾಗಿದ್ದೇಕೆ?
ಡಾಲರ್‌ನಲ್ಲಿ ಹೂಡಿಕೆಗೆ ಬೇಡಿಕೆ ವೃದ್ಧಿಸಿದ ಪರಿಣಾಮ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆಯ (ಎಫ್‌ಐಐ) ಹೊರ ಹರಿವು ಹೆಚ್ಚಳವಾಗಿದ್ದು, ಡಾಲರ್ ಪ್ರಾಬಲ್ಯ ವೃದ್ಧಿಸಿದೆ. ರೂಪಾಯಿ ಸೇರಿದಂತೆ ಹಲವು ಕರೆನ್ಸಿಗಳು ದುರ್ಬಲವಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಇದುವರೆಗೆ 2022ರಲ್ಲಿ 1.3 ಲಕ್ಷ ಕೋಟಿ ರೂ. ಮೌಲ್ಯದ ಈಕ್ವಿಟಿ ಷೇರುಗಳ ಮಾರಾಟವಾಗಿದೆ.
ಸಾಧಕ-ಬಾಧಕ ಏನು?
ರೂಪಾಯಿ ದುರ್ಬಲವಾದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಭಾರತದಲ್ಲಿನ ಹೂಡಿಕೆಗೆ ಆದಾಯ ಇಳಿಕೆಯಾಗುತ್ತದೆ. ಹೀಗಾಗಿ ಮತ್ತಷ್ಟು ಹೂಡಿಕೆಯ ಹೊರ ಹರಿವು ಸಂಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ನಷ್ಟ ಆಗಬಹುದು. ಭಾರತಕ್ಕೆ ಆಮದು ದುಬಾರಿಯಾಗಬಹುದು. ಕಚ್ಚಾ ತೈಲ, ಬಂಗಾರ, ಎಲೆಕ್ಟ್ರಿಕ್ ಉತ್ಪನ್ನಗಳ ಆಮದು ಮತ್ತಷ್ಟು ತುಟ್ಟಿಯಾಗಲಿದೆ. ಹಣದುಬ್ಬರ ಹೆಚ್ಚಳವಾಗಬಹುದು, ವಿದೇಶಿ ಶಿಕ್ಷಣ, ಪ್ರವಾಸ ವೆಚ್ಚ ಹೆಚ್ಚಳವಾಗಲಿದೆ. ಹೀಗಿದ್ದರೂ, ರಫ್ತುದಾರರಿಗೆ ಅನುಕೂಲ. ಡಾಲರ್ ಅನ್ನು ಪರಿವರ್ತಿಸಿದಾಗ ಹೆಚ್ಚು ರೂಪಾಯಿ ಆದಾಯ ಸಿಗಲಿದೆ. ಐಟಿ ರಫ್ತುದಾರ ಕಂಪನಿಗಳ ಆದಾಯ ಮತ್ತು ಲಾಭ ವೃದ್ಧಿಸಲಿದೆ.
ಡಾಲರ್ ಎದುರು ರೂಪಾಯಿ
ಡಾಲರ್ ಎದುರು ರೂಪಾಯಿ ಮೌಲ್ಯ ಈಗ 77ಕ್ಕೆ ಕುಸಿದಿದೆ. 2014ರಲ್ಲಿ ಸರಾಸರಿ ದರ 60 ರೂ.ಗಳ ಮಟ್ಟದಲ್ಲಿತ್ತು. 2017ರ ವೇಳೆಗೆ 65, 2019ರ ವೇಳೆಗೆ 70ಕ್ಕೆ ಇಳಿದಿತ್ತು.