Site icon Vistara News

ವಿಸ್ತಾರ MoneyGuide: ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚು ಆದಾಯ ನೀಡುವ ಮ್ಯೂಚುವಲ್‌ ಫಂಡ್‌ಗಳಿಗೆ ಹೂಡಿಕೆಯ ಪ್ರವಾಹ

mutual funds

ಬೆಂಗಳೂರು: ನೀವು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿರಬಹುದು, ಇಲ್ಲವೇ ಒಂದಿಲ್ಲೊಂದು ದಿನ ಅವುಗಳ ಬಗ್ಗೆ ಜನರು ಕುತೂಹಲದಿಂದ ವಿಚಾರಿಸುವುದನ್ನು, ಪತ್ರಿಕೆ, ಡಿಜಿಟಲ್‌ ನ್ಯೂಸ್‌, ಟಿವಿ ಚಾನೆಲ್‌ಗಳಲ್ಲಿ ಹಣಕಾಸು ತಜ್ಞರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಗಮನಿಸಿರಬಹುದು. ವಿಶೇಷ ಏನೆಂದರೆ ಕಳೆದ ಮೇನಲ್ಲಿ ಷೇರು ಮಾರುಕಟ್ಟೆತ ತೀವ್ರ ಏರಿಳಿತಗಳ ನಡುವೆಯೂ, ಭಾರತದ ಮ್ಯೂಚುವಲ್‌ ಫಂಡ್‌ ಈಕ್ವಿಟಿ ಯೋಜನೆಗಳಿಗೆ ಬರೋಬ್ಬರಿ 15,890 ಕೋಟಿ ರೂಪಾಯಿಗಳ ‌ನಿವ್ವಳ ಹೂಡಿಕೆಯ ಪ್ರವಾಹ ಹರಿದು ಬಂದಿದೆ.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ ಇಂಡಸ್ಟ್ರಿಯಲ್ಲಿ ನಿರ್ವಹಣೆಯಾಗುತ್ತಿರುವ ಹಣಕಾಸು ಆಸ್ತಿಯ ಮೌಲ್ಯ 2022ರ ಮೇ 31ರ ವೇಳೆಗೆ 37.22 ಲಕ್ಷ ಕೋಟಿ ರೂ.ಗಳಾಗಿತ್ತು! ಅಂದ್ರೆ ಭಾರತದ 2022-23ನೇ ಸಾಲಿನ ಬಜೆಟ್‌ ಗಾತ್ರಕ್ಕಿಂತ ಒಂದೆರಡು ಲಕ್ಷ ಕೋಟಿ ರೂ. ಕಡಿಮೆಯಷ್ಟೇ. (ಬಜೆಟ್‌ ಗಾತ್ರ-39 ಲಕ್ಷ ಕೋಟಿ ರೂ.)

ಸ್ಮಾರ್ಟ್‌ ಆಗುತ್ತಿರುವ ಹೂಡಿಕೆದಾರರು

ಮ್ಯೂಚುವಲ್‌ ಫಂಡ್‌ ಯೋಜನೆಗಳಿಗೆ ಹೆಚ್ಚುತ್ತಿರುವ ಹೂಡಿಕೆಯು ಭಾರತದಲ್ಲಿ ಸಣ್ಣ ಉಳಿತಾಯಗಾರರು ಪ್ರಬುದ್ಧರಾಗುತ್ತಿರುವುದನ್ನು ಬಿಂಬಿಸಿದೆ. ಹೂಡಿಕೆದಾರರು ಸ್ಮಾರ್ಟ್‌ ಆಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಜೆಆರ್‌ಎಲ್‌ ಮನಿಯ ಸ್ಟ್ರಾಟಜಿಸ್ಟ್‌ ಆಗಿರುವ ವಿಜಯ್‌ ಮಂತ್ರಿ.

ಎಸ್‌ಐಪಿ ಖಾತೆಗಳ ಸಂಖ್ಯೆ ಮೇನಲ್ಲಿ ಹೆಚ್ಚಳ

ಮ್ಯೂಚುವಲ್‌ ಫಂಡ್‌ಗಳಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಬಹುದು. ಇದನ್ನು ವ್ಯವಸ್ಥಿತ ಹೂಡಿಕೆ ಯೋಜನೆ (Systematic investment plans-SIP) ಎನ್ನುತ್ತಾರೆ. ಒಮ್ಮೆಗೇ ಇಡಿಯಾಗಿ ಹೂಡಲೂ ಅವಕಾಶ ಇದೆ. ಗಮನಿಸಲೇಬೇಕಾದ ಅಂಶವೇನೆಂದರೆ ಮಾರುಕಟ್ಟೆಯ ತೀವ್ರ ಏರಿಳಿತದ ನಡುವೆಯೂ, 2022ರ ಏಪ್ರಿಲ್‌ನಲ್ಲಿ ಎಸ್‌ಐಪಿನಲ್ಲಿ ಹೂಡಿಕೆದಾರರು 11.863 ಕೋಟಿ ರೂ.ಗಳನ್ನು ಹೂಡಿದ್ದರೆ, ಮೇನಲ್ಲಿ 12,286 ಕೋಟಿ ರೂ.ಗಳನ್ನು ಹೂಡಿದ್ದಾರೆ. SIP ಖಾತೆಗಳ ಸಂಖ್ಯೆ ಕೂಡ ಇದೇ ಅವಧಿಯಲ್ಲಿ 5.39 ಕೋಟಿ ರೂ.ಗಳಿಂದ 5.48 ಕೋಟಿ ರೂ.ಗೆ ಏರಿಕೆಯಾಗಿದೆ. ಮಾರುಕಟ್ಟೆ ದುರ್ಬಲ ಆಗಿದ್ದಾಗ ಹಣವನ್ನು ಹೂಡಿಕೆ ಮಾಡಿ, ಷೇರುಗಳ ಬೆಲೆ ಏರಿದಾಗ ಮಾರಾಟ ಮಾಡಿ ಲಾಭವನ್ನು ನಿಮ್ಮದಾಗಿಸಿ ಎನ್ನುತ್ತಾರೆ ಬಹುತೇಕ ಹೂಡಿಕೆ ತಜ್ಞರು.

ಹೆಚ್ಚುತ್ತಿರುವ ಬಡ್ಡಿ ದರ, ಜಾಗತಿಕ ಅನಿಶ್ಚಿತತೆ, ಕೋವಿಡ್‌ನ ಹೊಸ ಅಲೆಯ ಆರಂಭಿಕ ಲಕ್ಷಣದ ಹಿನ್ನೆಲೆಯಲ್ಲಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಪ್‌ ವಿಧಾನದ ಮೂಲಕ ಹೂಡಿಕೆಗೆ ಬಯಸುತ್ತಿದ್ದಾರೆ.

ಹೀಗೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಹಲವು ಅಚ್ಚರಿದಾಯಕ ಅಂಕಿ ಅಂಶಗಳನ್ನು, ಅದಕ್ಕೆ ಹೆಚ್ಚುತ್ತಿರುವ ಡಿಮಾಂಡ್‌ ಅನ್ನು ನೀವು ಗಮನಿಸಿರಬಹುದು. ಇವೆಲ್ಲವೂ ನಿಜವೂ ಹೌದು. ನಿಮ್ಮ ಹಣವನ್ನು ಬೆಳೆಸಲು ಮ್ಯೂಚುವಲ್‌ ಫಂಡ್‌ ಅತ್ಯಂತ ಸ್ಮಾರ್ಟ್‌ ಆಗಿರುವ ದಾರಿ ಎನ್ನುತ್ತಾರೆ ತಜ್ಞರು. ಹಾಗಾದರೆ ಇವುಗಳಲ್ಲಿ ಹೂಡಿಕೆ ಜನಪ್ರಿಯತೆ ಗಳಿಸಲು ಕಾರಣವೇನು?

ಕನಿಷ್ಠ 100 ರೂ.ಗಳಿಂದಲೂ ಹೂಡಿಕೆ ಸಾಧ್ಯ

ಮ್ಯೂಚುವಲ್‌ ಫಂಡ್‌ಗಳಲ್ಲಿ ಕನಿಷ್ಠ 100 ರೂಪಾಯಿಗಳಿಂದಲೂ ಹೂಡಿಕೆಯನ್ನು ಆರಂಭಿಸಬಹುದು ಎಂಬುದೇ ಇದರ ಜನಪ್ರಿಯತೆಗೆ ಕಾರಣ. ನಿಮ್ಮ ಬಳಿ ಇದಕ್ಕೆ ಲಕ್ಷಾಂತರ ರೂ. ಇರಬೇಕೆಂದಿಲ್ಲ. SIP ಮೂಲಕ ಪ್ರತಿ ತಿಂಗಳು 100 ರೂ.ಗಳ ಸಣ್ಣ ಮೊತ್ತದಿಂದ ಬೇಕಾದರೂ ಮ್ಯೂಚುವಲ್‌ ಫಂಡ್‌ ಹೂಡಿಕೆಯ ಪ್ರಯಾಣವನ್ನು ಆರಂಭಿಸಬಹುದು. ಹೂಡಿಕೆಯ ಅಭಿರುಚಿಯನ್ನು ಇದು ಹುಟ್ಟು ಹಾಕುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಪ್ರತಿಯೊಂದನ್ನೂ ನೀವೇ ಮಾಡಬೇಕಿಲ್ಲ

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯ ಎಲ್ಲ ಸಂಗತಿಗಳನ್ನೂ ನೀವೇ ಮಾಡಬೇಕಿಲ್ಲ. ಇಲ್ಲಿ ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ನಿಮ್ಮ ಪರವಾಗಿ ಷೇರು, ಬಾಂಡ್‌, ಇಟಿಎಫ್‌ ಇತ್ಯಾದಿ ಸಾಧನಗಳಲ್ಲಿ ಹೂಡಿಕೆ ಮಾಡುತ್ತಾರೆ. ಅವರಿಗೆ ಎಲ್ಲಿ ಹೂಡಿದರೆ ಲಾಭದಾಯಕ ಎಂಬುದರ ಬಗ್ಗೆ ಒಂದು ಪರಿಕಲ್ಪನೆ ಇರುತ್ತದೆ. ಅದು ಅವರ ವೃತ್ತಿಪರ ಅನುಭವದಿಂದ ಗಳಿಸಿಕೊಂಡಿರುವಂಥದ್ದು. ಅದು ಎಲ್ಲರಲ್ಲೂ ಇರಬೇಕೆಂದೇನಿಲ್ಲ. ಆದ್ದರಿಂದ ಮ್ಯೂಚುವಲ್‌ ಫಂಡ್‌ ಯೋಜನೆಯಲ್ಲಿ ನಿಗದಿತ ಅವಧಿಗೆ ಹಣ ಹೂಡಿಕೆ ಮಾಡಿ ನಿಶ್ಚಿಂತೆಯಿಂದ ಇರಬಹುದು. ಉಳಿದ ಕೆಲಸ ಫಂಡ್‌ ಮ್ಯಾನೇಜರ್‌ಗಳದ್ದು.

ಸುರಕ್ಷತೆ ಬಗ್ಗೆ ಆತಂಕ ಬೇಡ

ಮ್ಯೂಚುವಲ್‌ ಫಂಡ್‌ಗಳನ್ನು ಮಾರುಕಟ್ಟೆ ನಿಯಂತ್ರಕ ಸೆಬಿ (Securities and Exchange Board of India) ಶಿಸ್ತಿನಿಂದ ನಿಯಂತ್ರಿಸುತ್ತದೆ. ಆದ್ದರಿಂದ ನೀವು ಭಾರತದಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಭಾರಿ ಹಗರಣಗಳು ಆಗಿರುವುದನ್ನು ಕೇಳಿರಲಿಕ್ಕಿಲ್ಲ. ಪ್ರತಿಯೊಂದು ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಲ್ಲಿ ಯಾವುದೇ ಯೋಜನೆ ಶುರು ಮಾಡುವುದಕ್ಕೆ ಮುನ್ನ ಸೆಬಿಯಲ್ಲಿ ನೋಂದಣಿ ಆಗಿರಬೇಕು. ಆದ್ದರಿಂದ ಮ್ಯೂಚುವಲ್‌ ಫಂಡ್‌ ಹೌಸ್ ನಿಮ್ಮ ಹಣದೊಂದಿಗೆ ಮುಂದೊಂದು ದಿನ ಪರಾರಿ ಆಗಬಹುದು ಎಂಬ ಆತಂಕ ಬೇಡ.‌ ಹೀಗಿದ್ದರೂ, ಮ್ಯೂಚುವಲ್‌ ಫಂಡ್‌ಗಳಲ್ಲಿ ಆದಾಯವು ಮಾರುಕಟ್ಟೆಯ ಏರಿಳಿತಗಳನ್ನು ಆಧರಿಸಿದೆ.

ತೆರಿಗೆ ಉಳಿತಾಯದ ಅನುಕೂಲ

ಈಕ್ವಿಟಿ ಲಿಂಕ್ಡ್‌ ಸೇವಿಂಗ್‌ ಸ್ಕೀಮ್‌ (ELSS) ಯೋಜನೆಗಳಲ್ಲಿ ವಾರ್ಷಿಕ 1.5 ಲಕ್ಷ ರೂ. ಹೂಡಿಕೆಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ಆದಾಯ ತೆರಿಗೆ ಉಳಿತಾಯ ಮಾಡಬಹುದು. ELSS ಒಂದು ಈಕ್ವಿಟಿ ಮ್ಯೂಚುವಲ್‌ ಫಂಡ್ ಯೋಜನೆಯಾಗಿದ್ದು‌ ನಾನಾ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಈಕ್ವಿಟಿ ಫಂಡ್‌ ಯೋಜನೆಯಲ್ಲಿ ವಾರ್ಷಿಕ ಆದಾಯ (Capital gains) 1 ಲಕ್ಷ ರೂ.ಗಿಂತ ಕೆಳಗಿದ್ದರೆ, ಅದಕ್ಕೆ ತೆರಿಗೆ ಕೊಡಬೇಕಿಲ್ಲ.

ಹೂಡಿಕೆ ಹಿಂತೆಗೆತ ಸುಲಭ

ತುರ್ತು ಸಂದರ್ಭಗಳಲ್ಲಿ ಮ್ಯೂಚುವಲ್‌ ಫಂಡ್‌ ಯೋಜನೆಯಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದು ಕೂಡ ಸುಲಭ. ಫಂಡ್‌ ಚೆನ್ನಾಗಿ ಕಾರ್ಯನಿರ್ವಹಿಸದಿದ್ದರೂ ಹಣ ವಾಪಸ್‌ ಪಡೆಯಬಹುದು. 1-3 ದಿನಗಳಲ್ಲಿ ಇದು ನಡೆಯುತ್ತದೆ.

ಹೂಡಿಕೆಯ ವೈವಿಧ್ಯತೆ ಹೆಚ್ಚಿಸಲು ಸಹಕಾರಿ

ಕೇವಲ ಚಿನ್ನ , ಸಣ್ಣ ಉಳಿತಾಯ ಯೋಜನೆಗಳು ಅಥವಾ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಕೆಲವು ಅನಾನುಕೂಲತೆ ಇದೆ. ಹೂಡಿಕೆಯನ್ನು ವೈವಿಧ್ಯಗೊಳಿಸಲು ಮ್ಯೂಚುವಲ್ ಫಂಡ್‌ ಸೂಕ್ತ. ಹಣದುಬ್ಬರ ಉನ್ನತ ಮಟ್ಟದಲ್ಲಿ ಇದ್ದಾಗ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಮೌಲ್ಯವನ್ನು ಕಳೆಯುತ್ತದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ ಸಹಕಾರಿಯಾಗುತ್ತದೆ.

ಇದನ್ನೂ ಓದಿ:ವಿಸ್ತಾರ MoneyGuide: ಗೂಗಲ್‌ ಪೇ, ಪೇಟಿಎಂ ಜತೆ ರುಪೇ ಕ್ರೆಡಿಟ್‌ ಕಾರ್ಡ್‌ ಲಿಂಕ್‌ ಮಾಡಲು ಆರ್‌ಬಿಐ ಗ್ರೀನ್‌ ಸಿಗ್ನಲ್

Exit mobile version