ಕೊಲಂಬೊ: ಶ್ರೀಲಂಕಾದ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಕಚ್ಚಾ ತೈಲ ಆಮದು ಮಾಡಿಕೊಳ್ಳಲೂ ದುಡ್ಡಿಲ್ಲ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕೈ ಚೆಲ್ಲಿದ್ದಾರೆ.
“ನಾವೀಗ ಕೇವಲ ಇಂಧನ, ಅನಿಲ, ವಿದ್ಯುತ್ ಮತ್ತು ಆಹಾರದ ಕೊರತೆಗಿಂತಲೂ ದೊಡ್ಡ ವಿಪತ್ತು ಎದುರಿಸುತ್ತಿದ್ದೇವೆ, ನಮ್ಮ ಎಕಾನಮಿ ಸಂಪೂರ್ಣ ಕುಸಿದಿದೆʼʼ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಸಂಸತ್ತಿಗೆ ತಿಳಿಸಿದ್ದಾರೆ.
ಶ್ರೀಲಂಕಾದ ಹಣಕಾಸು ಮಂತ್ರಿಯೂ ಆಗಿರುವ ರನಿಲ್ ವಿಕ್ರಮಸಿಂಘೆ ಅವರು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಯ ಹಳಿಗೆ ತರುವಲ್ಲಿ ಸರಕಾರ ವಿಫಲವಾಗಿದೆ. ವಿದೇಶಿ ವಿನಿಮಯ ಸಂಗ್ರಹ ತೀವ್ರ ಕುಸಿಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಭಾರತವು ಶ್ರೀಲಂಕಾಗೆ ೪೦೦ ಶತಕೋಟಿ ಡಾಲರ್ ನೆರವನ್ನು ನೀಡಿದ್ದು, ( ಅಂದಾಜು ೩೧ ಲಕ್ಷ ಕೋಟಿ ರೂ.) ಇದರಿಂದ ಪ್ರಯೋಜನವಾಗಿದೆ. ಆದರೆ ಭಾರತವೂ ದೀರ್ಘಕಾಲ ನೆರವು ಮುಂದುವರಿಸಲಾರದು ಎಂದು ರನಿಲ್ ವಿಕ್ರಮಸಂಘೆ ಹೇಳಿದ್ದಾರೆ. ವಿದೇಶಿ ವಿನಿಮಯ ಸಂಗ್ರಹ ಬರಿದಾಗುತ್ತಿರುವುದರಿಂದ ಲಂಕಾದಲ್ಲಿ ಅಗತ್ಯ ವಸ್ತುಗಳಿಗೂ ಜನತೆ ಪರದಾಡುವಂತಾಗಿದೆ.
ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ 700 ದಶಲಕ್ಷ ಡಾಲರ್ ( ೫.೪೬ ಲಕ್ಷ ಕೋಟಿ ರೂ.) ಸಾಲವನ್ನು ಹೊಂದಿದೆ. ಹೀಗಾಗಿ ಯಾರೂ ಕಚ್ಚಾ ತೈಲ ಮಾರಾಟ ಮಾಡಲು ಸಿದ್ಧರಿಲ್ಲ. ನಗದಿಗೆ ತೈಲ ಕೊಡಲೂ ಹಿಂಜರಿಯುತ್ತಿವೆ ಎಂದು ರನಿಲ್ ವಿವರಿಸಿದ್ದಾರೆ.