ನವ ದೆಹಲಿ: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಎಂಸಿಎಲ್‌ಆರ್ ಆಧರಿತ (SBI Interest rate hike) ಸಾಲಗಳ ಬಡ್ಡಿ ದರಗಳಲ್ಲಿ 0.15% ತನಕ ಏರಿಕೆ ಮಾಡಿದೆ.
ನವೆಂಬರ್ 15ರಿಂದಲೇ ಪರಿಷ್ಕೃತ ಬಡ್ಡಿ ದರಗಳು ಅನ್ವಯವಾಗುತ್ತಿದೆ. ಹೀಗಾಗಿ ಎಂಸಿಎಲ್‌ಆರ್ ಆಧರಿತ ಸಾಲಗಳ ಇಎಂಐ ಏರಿಕೆಯಾಗಲಿದೆ.
ಒಂದು ತಿಂಗಳು ಮತ್ತು ಮೂರು ತಿಂಗಳಿನ ಎಂಸಿಎಲ್‌ಆರ್ ದರವನ್ನು 7.60%ರಿಂದ 7.75%ಕ್ಕೆ ಪರಿಷ್ಕರಿಸಲಾಗಿದೆ. ಆರು ತಿಂಗಳು ಮತ್ತು ಒಂದು ವರ್ಷ ಅವಧಿಯ ಎಂಸಿಎಲ್‌ಆರ್ ದರ 7.90%ರಿಂದ 8.05%ಕ್ಕೆ ಏರಿಕೆಯಾಗಿದೆ. ಮೂರು ವರ್ಷಗಳ ಎಂಸಿಎಲ್‌ಆರ್ ದರ 8.15%ರಿಂದ 8.25%ಕ್ಕೆ ವೃದ್ಧಿಸಲಾಗಿದೆ.
ಏನಿದು ಎಂಸಿಎಲ್‌ಆರ್?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಎಂಬುದು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿ ದರ ನಿಗದಿಯ ಪದ್ಧತಿಗಳಲ್ಲೊಂದು. ಆರ್‌ಬಿಐ 2016ರಲ್ಲಿ ಎಂಸಿಎಲ್‌ಆರ್ ಪದ್ಧತಿಯನ್ನು ಪರಿಚಯಿಸಿತ್ತು. ಬ್ಯಾಂಕಿನ ಸಾಲದ ಬಡ್ಡಿಗಳ ಕನಿಷ್ಠ ಬಡ್ಡಿ ದರವನ್ನು ನಿರ್ಣಯಿಸಲು ಇದು ಸಹಕಾರಿ. ಎಂಸಿಎಲ್‌ಆರ್ ದರ ಏರಿಕೆಯಿಂದ ತನ್ನಿಂತಾನೆ ಅದನ್ನು ಆಧರಿಸಿದ ಗೃಹ, ವಾಹನ, ಕಾರ್ಪೊರೇಟ್ ಸಾಲಗಳ ಬಡ್ಡಿ ದರ ಏರಿಕೆಯಾಗಲಿದೆ.