ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಸೆಂಬರ್‌ನಲ್ಲಿ ಪ್ರಕಟಿಸಲಿರುವ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಸಾಧ್ಯತೆ ಇದೆ. (Interest rate hike) ಇದರೊಂದಿಗೆ ರೆಪೊ ದರ ಆಧರಿತ ಎಲ್ಲ ಸಾಲಗಳ ಬಡ್ಡಿ ದರಗಳು ಕೂಡ ಮತ್ತೆ ಅರ್ಧ ಪರ್ಸೆಂಟ್ ತನಕ ಏರಿಕೆಯಾಗಲಿದೆ.
ಆಹಾರ ವಸ್ತುಗಳ ದರ ಜಿಗಿತದೊಂದಿಗೆ, ರಿಟೇಲ್ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 7.4%ಕ್ಕೆ ಏರಿಕೆಯಾಗಿರುವುದು ಆರ್‌ಬಿಐಗೆ ಸವಾಲಾಗಿ ಪರಿಣಮಿಸಿದೆ. ಇದು ಕಳೆದ ಐದು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟವಾಗಿದೆ. ಹಣದುಬ್ಬರವು ಆರ್‌ಬಿಐ ಟಾರ್ಗೆಟ್‌ಗಿಂತ ಮೇಲಿದೆ. ಆರ್‌ಬಿಐ ಪ್ರಕಾರ ಹಣದುಬ್ಬರವು 4%ಗಿಂತ 2% ಹೆಚ್ಚು ಅಥವಾ ಕಡಿಮೆ ಇದ್ದರೆ ಸುರಕ್ಷಿತ ಮಟ್ಟದಲ್ಲಿ ಇದೆ ಎಂದರ್ಥ. ಅಂದರೆ ಗರಿಷ್ಠ 6% ತನಕ ಇರಬಹುದು. ಸತತ 9 ತಿಂಗಳಿನಿಂದ ಹಣದುಬ್ಬರ ಆರ್‌ಬಿಐನ 2-6% ಮಟ್ಟಕ್ಕಿಂತ ಮೇಲಿದೆ.
ಆರ್‌ಬಿಐನಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ:
ಹಣದುಬ್ಬರ ನಿಯಂತ್ರಣ ನೀತಿ ಕುರಿತ ಚೌಕಟ್ಟಿನ ಪ್ರಕಾರ ಸತತ 9 ತಿಂಗಳಿನಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ, ಆಗ ಆರ್‌ಬಿಐ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಅದರಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಆಗದಿರುವುದಕ್ಕೆ ಕಾರಣಗಳನ್ನು ವಿವರಿಸಬೇಕಾಗುತ್ತದೆ. ಪರಿಹಾರಗಳನ್ನು ಸೂಚಿಸಬೇಕಾಗುತ್ತದೆ.
ಕಾರ್ಖಾನೆಗಳಲ್ಲಿ ಉತ್ಪಾದನೆ ಇಳಿಕೆಯಾಗಿರುವುದು, ಜಾಗತಿಕ ವಿದ್ಯಮಾನಗಳು ಆರ್‌ಬಿಐಗೆ ಮತ್ತಷ್ಟು ಸವಾಲುಗಳನ್ನೇ ಒಡ್ಡಿವೆ. ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಾಗಿದ್ದು, ತರಕಾರಿಗಳು ಹಾನಿಗೀಡಾಗಿವೆ. ಇದು ತರಕಾರಿಗಳ ದರ ಏರಿಸಲಿವೆ. ಈ ಎಲ್ಲ ಕಾರಣಗಳಿಂದಾಗಿ ಆರ್‌ಬಿಐಗೆ ರೆಪೊ ದರವನ್ನು ಏರಿಸದೆ ವಿಧಿ ಇಲ್ಲ ಎಂಬಂತಾಗಿದೆ.
ರೆಪೊ ದರ ಏರಿದರೆ ಪರಿಣಾಮ ಏನು? ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮ ಅದನ್ನು ಆಧರಿಸಿದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕಾರ್ಪೊರೇಟ್ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ. ಇಎಂಐ ಹೊರೆ ಹೆಚ್ಚಲಿದೆ. ಠೇವಣಿದಾರರಿಗೆ ಕೂಡ ಅಲ್ಪ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆಯ ಅನುಕೂಲ ಸಿಗಲಿದೆ.