Site icon Vistara News

ಅಮೆರಿಕದಲ್ಲಿ ಬಡ್ಡಿದರ 0.75% ಹೆಚ್ಚಳ, ಭಾರತದಲ್ಲಿ ಮುಂದಿನ ವಾರ 0.35% ಏರಿಕೆ?

rbi

ಮುಂಬಯಿ: ಅಮೆರಿಕದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಅಲ್ಲಿನ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಮತ್ತೆ ೦.೭೫ ಕಡಿತಗೊಳಿಸಿದೆ. ಇತ್ತ ಭಾರತದಲ್ಲೂ ರಿಸರ್ವ್‌ ಬ್ಯಾಂಕ್‌ ಮುಂದಿನ ವಾರ ತನ್ನ ರೆಪೊ ದರದಲ್ಲಿ ೦.೩೫%ರಿಂದ ೦.೫೦% ತನಕ ಏರಿಕೆ ಮಾಡುವ ನಿರೀಕ್ಷೆ ಇದೆ. ಆಗಸ್ಟ್‌ ೫ಕ್ಕೆ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಸತತ ಎರಡನೇ ತಿಂಗಳಿಗೆ ಬಡ್ಡಿ ದರವನ್ನು ಏರಿಸಿದೆ. ಇದರೊಂದಿಗೆ ಹಣದುಬ್ಬರವನ್ನು ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸಿದೆ. ಅಮೆರಿಕದಲ್ಲಿ ಕಳೆದ ೪೦ ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಹಣದುಬ್ಬರ ಅಥವಾ ಬೆಲೆ ಏರಿಕೆ ದಾಖಲಾಗಿದೆ. ಕಳೆದ ಜೂನ್‌ನಲ್ಲಿ ಹಣದುಬ್ಬರ ೯.೧%ಕ್ಕೆ ಏರಿತ್ತು.

ಈ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರದಲ್ಲಿ ೭೫ ಬೇಸಿಸ್‌ ಪಾಯಿಂಟ್‌ನಷ್ಟು ಏರಿಸಿದೆ. ೧೦೦ ಬೇಸಿಸ್‌ ಪಾಯಿಂಟ್‌ ಸೇರಿದರೆ ೧ ಪರ್ಸೆಂಟ್‌ ಆಗುತ್ತದೆ. ಇದರಿಂದಾಗಿ ಅಮೆರಿಕದ ಬಾಂಡ್‌, ಕರೆನ್ಸಿ ಮತ್ತು ಈಕ್ವಿಟಿ ಮಾರುಕಟ್ಟೆಗಳಲ್ಲಿ ವಹಿವಾಟು ಚೇತರಿಸಬಹುದು. ಹೀಗಿದ್ದರೂ, ಫೆಡರಲ್‌ ರಿಸರ್ವ್‌ ತನ್ನ ಮುಂದಿನ ನಡೆ ಏನೆಂಬ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಸೌಮ್ಯ ಕಾಂತಿ ಘೋಷ್‌ ಅವರ ಪ್ರಕಾರ ಆರ್‌ಬಿಐ ತನ್ನ ಬಡ್ಡಿ ದರದಲ್ಲಿ ಶೇ.೦.೩೫ ಏರಿಕೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ೨೦೨೦ರ ಮಾರ್ಚ್‌ ೨೭ರ ಮಟ್ಟಕ್ಕೆ ಬಡ್ಡಿ ದರ ಬಂದು ನಿಲ್ಲಲಿದೆ. ಕೋವಿಡ್-‌೧೯ ಬಿಕ್ಕಟ್ಟಿನ ಸಂದರ್ಭ ಆರ್ಥಿಕತೆಯ ಚೇತರಿಕೆಗೆ ಅಂದಿನಿಂನ ಆರ್‌ಬಿಐ ಬಡ್ಡಿ ದರ ಕಡಿತವನ್ನು ಆರಂಭಿಸಿತ್ತು. ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಪರಿಣಾಮ ಮುಂಬರುವ ದಿನಗಳಲ್ಲಿ ಹಣದುಬ್ಬರದ ಪ್ರಮಾಣ ಇಳಿಕೆಯಾಗುವ ನಿರೀಕ್ಷೆ ಇದೆ.

ಬಡ್ಡಿ ದರ ಹೆಚ್ಚಳಕ್ಕೆ ಒತ್ತಡ: ಡನ್‌ & ಬ್ರಾಡ್‌ಸ್ಟ್ರೀಟ್‌ನ ಅರ್ಥಶಾಸ್ತ್ರಜ್ಞ ಅರುಣ್‌ ಸಿಂಗ್‌ ಪ್ರಕಾರ ಬಡ್ಡಿ ದರ ಏರಿಸಬೇಕಾದ ಒತ್ತಡವನ್ನು ಆರ್‌ಬಿಐ ಎದುರಿಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವಿನ ಪರಿಣಾಮ ರೂಪಾಯಿ ಮೌಲ್ಯ ಮತ್ತಷ್ಟು ಕುಸಿತಕ್ಕೀಡಾಗಬಹುದು. ಆಗ ಅದನ್ನು ತಡೆಯಲು ಆರ್‌ಬಿಐ ಮಧ್ಯಪ್ರವೇಶಿಸುವುದರಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಇಳಿಕೆಯಾಗಬಹುದು. ವಿದೇಶಿ ವಿನಿಮಯ ಸಂಗ್ರಹ ಕಳೆದ ಜೂನ್‌ನಲ್ಲಿ ೧೫ ತಿಂಗಳಿನಲ್ಲೇ ಗರಿಷ್ಠ ಮಟ್ಟಕ್ಕೆ ಕುಸಿದಿದೆ. ವಿತ್ತೀಯ ಕೊರತೆ ಹೆಚ್ಚುತ್ತಿದೆ. ಇದು ರೂಪಾಯಿಯ ಮೇಲಿನ ಒತ್ತಡವನ್ನು ಹೆಚ್ಚಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ವರ್ಷ ಬಡ್ಡಿ ದರ ಏರಿಕೆ (ಶೇಕಡಾವಾರು)

ಹಂಗೇರಿ8.35%
ಬ್ರೆಜಿಲ್‌4.00%
ಅಮೆರಿಕ2.25%
ಕೆನಡಾ2.25%
ಆಸ್ಟ್ರೇಲಿಯಾ1.25%
ದಕ್ಷಿಣ ಕೊರಿಯಾ1.25%
ಬ್ರಿಟನ್1%
ಭಾರತ0.90%
ಯುರೋಪ್‌0.50%

Exit mobile version