ಮುಂಬಯಿ: ಸೈಬರ್ ವಂಚಕರು ಕೋವಿಶೀಲ್ಡ್ ಲಸಿಕೆ ಉತ್ಪಾದಕ ದಿಗ್ಗಜ, ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ನಿರ್ದೇಶಕರಿಗೆ, ಸಿಇಒ ಅದಾರ್ ಪೂನಾವಾಲಾ (Adar Poonawalla) ಅವರ ಹೆಸರಿನಲ್ಲಿ ಹಣ ಕಳಿಸುವಂತೆ ಸಂದೇಶಗಳನ್ನು ಕಳಿಸಿ, ಕಂಪನಿಗೆ 1 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣ ನಡೆದಿದೆ.
ಸಿಇಒ ಅದಾರ್ ಪೂನಾವಾಲಾ ದುಡ್ಡು ಕೇಳಿದ್ದಾರೆ ಎಂದು ನಂಬಿದ ನಿರ್ದೇಶಕರು 1 ಕೋಟಿ ರೂ.ಗಳನ್ನು ಸೈಬರ್ ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಈ ವಂಚನೆಗೆ ಸಂಬಂಧಿಸಿ ಪುಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 7ರ ಮಧ್ಯಾಹ್ನ 1.30ರಿಂದ ಸೆಪ್ಟೆಂಬರ್ 8ರ ಮಧ್ಯಾಹ್ನ 2.30ರ ಅವಧಿಯಲ್ಲಿ ಘಟನೆ ನಡೆದಿದೆ.
ಆಗಿದ್ದೇನು? ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕರಾದ ಸತೀಶ್ ದೇಶಪಾಂಡೆ ಅವರಿಗೆ ಕಂಪನಿಯ ಸಿಇಒ ಅದಾರ್ ಪೂನಾವಾಲಾ ಹೆಸರಿನಲ್ಲಿ ಒಂದು ವಾಟ್ಸ್ ಆ್ಯಪ್ ಮೆಸೇಜ್ ಬಂದಿತ್ತು. ಅದರಲ್ಲಿ ತಕ್ಷಣ 1 ಕೋಟಿ ರೂ. ಹಣವನ್ನು ಕೆಲವು ಬ್ಯಾಂಕ್ ಖಾತೆಗಳಿಗೆ ಕಳಿಸುವಂತೆ ಬರೆದಿತ್ತು. ಸಿಇಒ ಅವರೇ ಸೂಚಿಸಿದ್ದಾರೆ ಎಂದು ಭಾವಿಸಿದ ಅಧಿಕಾರಿಗಳು ಒಟ್ಟು 1.01 ಕೋಟಿ ರೂ.ಗಳನ್ನು ( 1,01,01,554 ರೂ.) ಆನ್‌ಲೈನ್ ಮೂಲಕ ಕಂಪನಿಯ ಖಾತೆಯಿಂದ ಆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಪೂನಾವಾಲಾ ಅವರು ಇಂಥ ಯಾವುದೇ ಮೆಸೇಜ್ ಕಳಿಸಿಲ್ಲ ಎಂದು ತಿಳಿಸಿದ ಬಳಿಕ ಕಂಪನಿಯ ಅಧಿಕಾರಿಗಳಿಗೆ ತಾವು ವಂಚನೆಗೀಡಾಗಿರುವುದು ಗೊತ್ತಾಗಿದೆ.
ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್, ಕೋವಿಡ್-19 ವಿರುದ್ಧದ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುವುದರಲ್ಲಿ ವಿಶ್ವ ವಿಖ್ಯಾತವಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆಗಳನ್ನು ಈ ಸಂಸ್ಥೆ ಉತ್ಪಾದಿಸುತ್ತಿದೆ.