ನವ ದೆಹಲಿ: ತೈಲ ಕಂಪನಿಗಳು ಪೆಟ್ರೋಲ್ ಮಾರಾಟದಲ್ಲಿ ಪ್ರತಿ ಲೀಟರ್‌ಗೆ 10 ರೂ. ಲಾಭ ಗಳಿಸುತ್ತಿವೆ. ಆದರೆ ಡೀಸೆಲ್ ಮಾರಾಟದಲ್ಲಿ ಪ್ರತಿ ಲೀಟರ್‌ಗೆ 6.5 ರೂ. ನಷ್ಟ ಅನುಭವಿಸುತ್ತಿವೆ ಎಂದು (Profit on petrol) ಐಸಿಐಸಿಐ ಸೆಕ್ಯುರಿಟೀಸ್ ವರದಿ ತಿಳಿಸಿದೆ.
ಸಾರ್ವಜನಿಕ ವಲಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ಕಳೆದ 15 ತಿಂಗಳುಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಜಾಸ್ತಿ ಆಗಿದ್ದಾಗ ಉಂಟಾಗಿದ್ದ ನಷ್ಟವನ್ನು ಸಾಧ್ಯವಾದಷ್ಟು ಭರಿಸುವ ಸಲುವಾಗಿ, ಅಂತಾರಾಷ್ಟ್ರೀಯ ದರ ಕಡಿಮೆಯಾದಾಗ ಕಂಪನಿಗಳು ತಮ್ಮ ಗ್ರಾಹಕರಿಗೆ ರಿಟೇಲ್ ಬೆಲೆಯನ್ನು ತಗ್ಗಿಸುವುದಿಲ್ಲ.
2022ರ ಜೂನ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ ಕಂಪನಿಗಳಿಗೆ 17.4 ರೂ. ಹಾಗೂ ಡೀಸೆಲ್‌ನಲ್ಲಿ ಲೀಟರ್‌ಗೆ 27.7 ರೂ. ನಷ್ಟವಾಗಿತ್ತು. ಹೀಗಿದ್ದರೂ 2022ರ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ 10 ರೂ. ಲಾಭ ಹಾಗೂ ಡೀಸೆಲ್ ಮಾರಾಟದಲ್ಲಿ 6.5 ರೂ. ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.