ನವ ದೆಹಲಿ: ದಿನಸಿ ವಸ್ತುಗಳನ್ನು ತ್ವರಿತವಾಗಿ ಗ್ರಾಹಕರಿಗೆ ಒದಗಿಸುವ ಡೆಲಿವರಿ ಆ್ಯಪ್ ಜೆಪ್ಟೊ (Zepto) ಸ್ಟಾರ್ಟಪ್‌ನ ಸಂಸ್ಥಾಪಕ, 19 ವರ್ಷ ವಯಸ್ಸಿನ ಕೈವಲ್ಯ ವೊಹ್ರಾ ಅವರು 1,000 ಕೋಟಿ ರೂ. ನಿವ್ವಳ ಸಂಪತ್ತು ಗಳಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಶ್ರೀಮಂತ ಭಾರತೀಯ ಎನ್ನಿಸಿದ್ದಾರೆ.
ಐಐಎಫ್‌ಎಲ್‌ನ ವೆಲ್ತ್ ಹುರಾನ್ ಇಂಡಿಯಾದ ಸಮೀಕ್ಷೆಯ ಪ್ರಕಾರ, 1000 ಕೋಟಿ ರೂ. ನಿವ್ವಳ ಸಂಪತ್ತನ್ನು ಗಳಿಸಿದ ಕಿರಿಯ ಸ್ಟಾರ್ಟಪ್ ಉದ್ಯಮಿ ಕೈವಲ್ಯ ವೋಹ್ರಾ.
ಕೈವಲ್ಯ ವೋಹ್ರಾ ತಮ್ಮ ಸ್ನೇಹಿತ ಅದಿತ್ ಪಲಿಚಾ (20) ಜತೆ ಸೇರಿ 2020ರಲ್ಲಿ ಜೆಪ್ಟೊ (Zepto) ಸ್ಟಾರ್ಟಪ್ ಅನ್ನು ಸ್ಥಾಪಿಸಿದ್ದರು. ಅದಿತ್ ಪಲಿಚಾ 1,200 ಕೋಟಿ ರೂ. ಸಂಪತ್ತಿಗೆ ಒಡೆಯರಾಗಿದ್ದಾರೆ. ಜೆಪ್ಟೊದ ಮುಖ್ಯ ತಂತ್ರಜ್ಞಾನ ಅಧಿಕಾರಿಯೂ ಕೈವಲ್ಯ ಆಗಿದ್ದಾರೆ.
ಜೆಪ್ಟೊ ಕಳೆದ ಮೇನಲ್ಲಿ 200 ದಶಲಕ್ಷ ಡಾಲರ್ (1,580 ಕೋಟಿ ರೂ. ) ಹೂಡಿಕೆಯನ್ನು ಗಳಿಸಿತ್ತು. ಇದರೊಂದಿಗೆ ಜೆಪ್ಟೊದ ಮಾರುಕಟ್ಟೆ ಮೌಲ್ಯ 7,110 ಕೋಟಿ ರೂ.ಗೆ ವೃದ್ಧಿಸಿತ್ತು.
ಮುಂಬಯಿ ಮೂಲದ ಕೈವಲ್ಯ ವೋಹ್ರಾ, ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಗಳಿಸಿದವರು. ಇಬ್ಬರೂ ಡ್ರಾಪ್ ಔಟ್‌ಗಳು ಎಂಬ ವರದಿಗಳೂ ಇವೆ. ಅಂತೂ ಭಾರತಕ್ಕೆ ಮರಳಿದ ಬಳಿಕ 2020ರಲ್ಲಿ ದಿನಸಿಯನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಸ್ಟಾರ್ಟಪ್ ಶುರು ಮಾಡಿದರು.
10 ನಿಮಿಷದಲ್ಲಿ ಡೆಲಿವರಿ ಸೌಲಭ್ಯದ ಐಡಿಯಾ!
ಅದು ಕೋವಿಡ್ ಬಿಕ್ಕಟ್ಟಿನ ಸಂದರ್ಭ. ಕೈವಲ್ಯ ವೋಹ್ರಾ ಆರಂಭದಲ್ಲಿ ಕಿರಾಣ್ ಕಾರ್ಟ್ ಎಂಬ ಹೆಸರಿನಲ್ಲಿ ಇ-ಕಾಮರ್ಸ್ ದಿನಸಿ ವ್ಯಾಪಾರ ಆರಂಭಿಸಿದರು. ಬಳಿಕ ಜೆಪ್ಟೊಗೆ ಬದಲಾದರು. ಕೇವಲ 10 ನಿಮಿಷದಲ್ಲಿ ದಿನಸಿ ಪದಾರ್ಥಗಳನ್ನು ಗ್ರಾಹಕರ ಮನೆಗೆ ತಲುಪಿಸುವ ಭರವಸೆಯೊಂದಿಗೆ ವ್ಯಾಪಾರ ಮುಂದುವರಿಯಿತು. ಈಗ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆರಂಭದಲ್ಲಿ ಹೂಡಿಕೆದಾರರ ಜತೆಗಿನ ಸಭೆಯಲ್ಲಿ 10 ನಿಮಿಷದಲ್ಲಿ ಡೆಲಿವರಿ ಸೌಲಭ್ಯ ನೀಡುವ ಪರಿಕಲ್ಪನೆಯನ್ನು ಮಂಡಿಸಿದಾಗ ಹೂಡಿಕೆದಾರರು ನಂಬಲಾಗದೆ ನಕ್ಕು ಬಿಟ್ಟಿದ್ದರಂತೆ!