ನವ ದೆಹಲಿ: ಕಳೆದ ೬ ವಾರಗಳಲ್ಲಿ ಉದ್ದು, ತೊಗರಿ ದರದಲ್ಲಿ ೧೫% ಏರಿಕೆಯಾಗಿದ್ದು, (Price hike) ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸಿದೆ.
ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವುದರಿಂದ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕ ಉಂಟಾಗಿದೆ. ಉದ್ದು, ತೊಗರಿಯ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯಾಗುವ ಅಪಾಯ ಉಂಟಾಗಿದೆ. ಇದರಿಂದ ಬೆಳೆಯ ಉತ್ಪನ್ನದಲ್ಲಿ ಸ್ವಲ್ಪ ಕುಸಿತ ಉಂಟಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಉತ್ತಮ ಗುಣಮಟ್ಟದ ತೊಗರಿ ದರದಲ್ಲಿ ಕೆ.ಜಿಗೆ ೯೭ ರೂ.ಗಳಿಂದ ೧೧೫ ರೂ.ಗೆ ಏರಿಕೆಯಾಗಿದೆ.
ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ತೊಗರಿ ಬಿತ್ತನೆ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೪.೬% ಇಳಿಕೆಯಾಗಿದೆ. ಉದ್ದಿನ ಬಿತ್ತನೆ ಪ್ರದೇಶದಲ್ಲಿ ೨% ಇಳಿಕೆಯಾಗಿದೆ. ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಭಾರಿ ಮಳೆಯಾಗಿರುವುದರಿಂದ ಈ ಸಲ ಸಮಸ್ಯೆಯಾಗಿದೆ. ಹೀಗಿದ್ದರೂ, ತೊಗರಿ ದಾಸ್ತಾನು ಸಮೃದ್ಧವಾಗಿದ್ದು, ಈ ಸಲ ಉತ್ಪಾದನೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾದರೂ ತೊಂದರೆ ಆಗದು ಎಂದು ಮಾಹಾರಾಷ್ಟ್ರದ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಆಫ್ರಿಕಾದಿಂದ ೫ ಲಕ್ಷ ಟನ್ ಧಾನ್ಯ ಆಮದಾಗುವ ಸಾಧ್ಯತೆ ಇದೆ. ಉದ್ದಿನ ಬೆಳೆಯ ಉತ್ಪಾದನೆಯಲ್ಲಿ ಇಳಿಕೆಯಾದರೂ, ಆಮದು ಮೂಲಕ ಸರಿದೂಗಿಸಲಾಗುವುದು. ಹೋಗಾಗಿ ಪೂರೈಕೆಯ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇಲ್ಲ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಉದ್ದಿನ ಬೆಳೆ ಚೆನ್ನಾಗಿದೆ.
ಉದ್ದಿನ ಬೆಳೆ ಹಾನಿಯಾಗಿರುವ ರಾಜ್ಯಗಳು: ಮಹಾರಾಷ್ಟ್ರ, ಕರ್ನಾಟಕ, ಗುಜರಾತ್