Site icon Vistara News

Adani stocks : ಅದಾನಿ ಷೇರುಗಳಲ್ಲಿ 15,000 ಕೋಟಿ ರೂ. ಹೂಡಿ, 2 ದಿನಗಳಲ್ಲಿ 3,100 ಕೋಟಿ ರೂ. ಲಾಭ ಗಳಿಸಿದ ರಾಜೀವ್‌ ಜೈನ್

rajiv jain

ನವ ದೆಹಲಿ: ಖ್ಯಾತ ಭಾರತೀಯ ಅನಿವಾಸಿ ಹೂಡಿಕೆದಾರ ರಾಜೀವ್‌ ಜೈನ್‌ (Rajiv Jain) ನೇತೃತ್ವದ ಜಿಕ್ಯೂಜಿ ಪಾರ್ಟ್‌ನರ್ಸ್‌, ತೀವ್ರ ನಷ್ಟದಲ್ಲಿದ್ದ ಅದಾನಿ ಕಂಪನಿಗಳ ಷೇರುಗಳಲ್ಲಿ 15,446 ಕೋಟಿ ರೂ.ಗಳನ್ನು ಹೂಡಿಕೆ ಮಾಡಿರುವುದಲ್ಲದೆ, ಕೇವಲ 2 ದಿನಗಳಲ್ಲಿ ಬರೋಬ್ಬರಿ 3,100 ಕೋಟಿ ರೂ. ಲಾಭ ಗಳಿಸಿದೆ. (Adani stocks) ಹೂಡಿಕೆಯ ಮೇಲೆ 20% ಲಾಭ ಗಳಿಸಿರುವುದು ಇದಕ್ಕೆ ಕಾರಣ.

ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಟ್ರಾನ್ಸ್‌ಮಿಶನ್‌ನಲ್ಲಿ ಜೈನ್‌ ಅವರ 15,446 ಕೋಟಿ ರೂ. ಹೂಡಿಕೆಯು 18,548 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ 3,102 ಕೋಟಿ ರೂ. ಲಾಭವಾದಂತಾಗಿದೆ. (notional profit)

ಹಿಂಡೆನ್‌ ಬರ್ಗ್‌ ಕಳೆದ ಜನವರಿ 24ರಂದು ಅದಾನಿ ಗ್ರೂಪ್‌ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಕಂಪನಿಯ ಷೇರು ದರ ತೀವ್ರ ಕುಸಿದಿತ್ತು. ಮಾರುಕಟ್ಟೆ ಮೌಲ್ಯದಲ್ಲಿ 12 ಲಕ್ಷ ಕೋಟಿ ರೂ. ತನಕ ನಷ್ಟವಾಗಿತ್ತು. ಜೈನ್‌ ಅವರು ಅದಾನಿ ಎಂಟರ್‌ಪ್ರೈಸಸ್‌ ಷೇರನ್ನು ಪ್ರತಿ ಷೇರಿಗೆ 1,416 ರೂ. ದರದಲ್ಲಿ ಖರೀದಿಸಿದ್ದರು. ಬಳಿಕ ಷೇರು ದರದಲ್ಲಿ 33% ಏರಿಕೆಯಾಗಿತ್ತು. ಇದು ಅವರಿಗೆ 1813 ಕೋಟಿ ರೂ. ಲಾಭ ತಂದುಕೊಟ್ಟಿತ್ತು.

60,000 ಅಂಕಗಳ ಮೈಲುಗಲ್ಲು ದಾಟಿದ ಸೆನ್ಸೆಕ್ಸ್:

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೊಮವಾರ 415 ಅಂಕ ಚೇತರಿಸಿದ್ದು, 60,224 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 117 ಅಂಕ ಚೇತರಿಸಿಕೊಂಡು 17,711ಕ್ಕೆ ಸ್ಥಿರವಾಯಿತು. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1300 ಅಂಕ ಜಿಗಿದಿದ್ದು, 60 ಸಾವಿರ ಅಂಕಗಳ ಮೈಲುಗಲ್ಲನ್ನು ಕ್ರಮಿಸಿತು. ಬಿಎಸ್‌ಇಯ ಎಲ್ಲ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 265 ಲಕ್ಷ ಕೋಟಿ ರೂ.ಗೆ ಜಿಗಿಯಿತು.

Exit mobile version