ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (Current Fiscal Year) ಇಲ್ಲಿಯವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collection) ಶೇ.19.41ಕ್ಕೆ ಏರಿಕೆಯಾಗಿದ್ದು, 14.70 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಹಣಕಾಸು ವರ್ಷದ ಗುರಿಯ ಶೇ.81 ರಷ್ಟು ತಲುಪಿದಂತಾಗಿದೆ (Budget Estimate) ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ನೇರ ತೆರಿಗೆಯಿಂದ 18.23 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸರ್ಕಾರ ಗುರಿ ಹಾಕಿಕೊಂಡಿತ್ತು. ಇದು, ಕಳೆದ ಹಣಕಾಸು ವರ್ಷದ 16.61 ಲಕ್ಷ ಕೋಟಿ ರೂಪಾಯಿಗಿಂತ ಶೇ.9.75 ರಷ್ಟು ಹೆಚ್ಚಾಗಿದೆ.
ನೇರ ತೆರಿಗೆ ಸಂಗ್ರಹ, ನಿವ್ವಳ ಮರುಪಾವತಿಯು 14.70 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ನಿವ್ವಳ ಸಂಗ್ರಹಕ್ಕಿಂತ 19.41 ಶೇಕಡಾ ಹೆಚ್ಚಾಗಿದೆ. ಈ ಸಂಗ್ರಹವು 2023-24 ಹಣಕಾಸು ವರ್ಷದ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜುಗಳ 80.61 ಪ್ರತಿಶತವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2023 ಏಪ್ರಿಲ್ 1 ರಿಂದ 2024ರ ಜನವರಿ 10ರವರೆಗೆ 2.48 ಲಕ್ಷ ಕೋಟಿ ಮೊತ್ತದ ಮರುಪಾವತಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಒಟ್ಟು ಆಧಾರದ ಮೇಲೆ ಹೇಳುವುದಾದರೆ, 2024ರ ಜನವರಿವರೆಗೆ ನೇರ ತೆರಿಗೆ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟು ಸಂಗ್ರಹಣೆಯು 17.18 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯ ಒಟ್ಟು ಸಂಗ್ರಹಕ್ಕಿಂತ 16.77 ಶೇಕಡಾ ಹೆಚ್ಚಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಟ್ಟು ಕಾರ್ಪೊರೇಟ್ ಆದಾಯ ತೆರಿಗೆ (CIT) ಮತ್ತು ವೈಯಕ್ತಿಕ ಆದಾಯ ತೆರಿಗೆ (PIT) ಬೆಳವಣಿಗೆ ದರವು ಕ್ರಮವಾಗಿ 8.32 ಶೇಕಡಾ ಮತ್ತು 26.11 ಶೇಕಡಾ ಇದೆ. ಮರುಪಾವತಿಗಳ ಹೊಂದಾಣಿಕೆಯ ನಂತರ ಕಾರ್ಪೊರೇಟ್ ಆದಾಯ ತೆರಿಗೆ ಸಂಗ್ರಹಣೆಯಲ್ಲಿನ ನಿವ್ವಳ ಬೆಳವಣಿಗೆಯು 12.37 ಪ್ರತಿಶತ ಮತ್ತು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹಣೆಯಲ್ಲಿ 27.26 ಪ್ರತಿಶತವಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಜ.31ರಿಂದ ಬಜೆಟ್ ಅಧಿವೇಶನ; ಕಿಸಾನ್ ಸಮ್ಮಾನ್ ನಿಧಿ ಹಣ ಡಬಲ್?
ಕೇಂದ್ರ ಬಜೆಟ್ ಅಧಿವೇಶನವು (Budget Session) ಜನವರಿ 31ರಿಂದ ಆರಂಭವಾಗಿ, ಫೆಬ್ರವರಿ 9ರವರೆಗೂ ಮುಂದುವರಿಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ (Interim Budget) ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಅಧಿವೇಶನದ ಆರಂಭದ ದಿನ ಎರಡೂ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (rashtrapati draupadi murmu) ಅವರು ಮಾತನಾಡಲಿದ್ದು, ಪ್ರಮುಖ ಹಣಕಾಸು ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಬಜೆಟ್ ಅಧಿವೇಶನದಲ್ಲಿ ಯಾವುದೇ ಹೊಸ ಕಾನೂನು ಸಂಬಂಧ ಚರ್ಚೆಗಳಾಗದಿದ್ದರೂ, ಗೇಮ್ ಚೇಂಜರ್ ಎಂದು ಪ್ರತಿಬಿಂಬಿಸಲಾಗುತ್ತಿರುವ ಕಿಸಾನ್ ಸಮ್ಮಾನ್ ನಿಧಿ ಸ್ಕೀಮ್ ಮೊತ್ತವನ್ನು ಮಹಿಳಾ ರೈತರಿಗೆ ದ್ವಿಗುಣಗೊಳಿಸುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಮಹಿಳಾ ರೈತರಿಗೆ ನಿಧಿ ಮೊತ್ತವನ್ನು ವಾರ್ಷಿಕವಾಗಿ ದ್ವಿಗುಣಗೊಳಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ವರದಿ ಮಾಡಿತ್ತು. ಈ ಮೊತ್ತವನ್ನು 12 ಸಾವಿರ ರೂ. ವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ.
ಈ ಯೋಜನೆಯನ್ನು ಫೆಬ್ರವರಿ 1 ರಂದು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ ಮತ್ತು ಸರ್ಕಾರಕ್ಕೆ ಹೆಚ್ಚುವರಿ 12,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು.
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಮುಂಬರುವ ಬಜೆಟ್ ಪೂರ್ಣ ಬಜೆಟ್‌ಗಿಂತ ಮಧ್ಯಂತರ ಬಜೆಟ್ ಆಗಿರುತ್ತದೆ. ಏಕೆಂದರೆ ಎರಡು-ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿವೆ. ಆಡಳಿತಾರೂಢ ಸರ್ಕಾರವು ಚುನಾವಣಾ ವರ್ಷದಲ್ಲಿ ಅಥವಾ ಪೂರ್ಣ ಬಜೆಟ್‌ಗೆ ಸಾಕಷ್ಟು ಸಮಯವಿಲ್ಲದಿದ್ದಾಗ ಮಧ್ಯಂತರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತದೆ. ಚುನಾವಣೆಯ ನಂತರ ಬರುವ ಸರ್ಕಾರವು ಸಂಪೂರ್ಣ ವಾರ್ಷಿಕ ಬಜೆಟ್ ಅನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಈ ಸುದ್ದಿಯನ್ನೂ ಓದಿ: Budget 2024: ಕೇಂದ್ರ ಬಜೆಟ್‌ನಲ್ಲಿ ಈ 5 ಪ್ರಮುಖ ವರ್ಗಗಳಿಗೆ ಸಿಗಲಿದೆ ಆದ್ಯತೆ