ನವ ದೆಹಲಿ: ಈರುಳ್ಳಿ ಪ್ರಿಯರಿಗೆ ಇದು ನಿರಾಳ ಮೂಡಿಸುವ ಸುದ್ದಿ. ಕೇಂದ್ರ ಸರ್ಕಾರ ೨೦೨೨-೨೩ರಲ್ಲಿ ದಾಖಲೆಯ ೨.೫0 ಲಕ್ಷ ಟನ್ ಈರುಳ್ಳಿಯ ದಾಸ್ತಾನು ವ್ಯವಸ್ಥೆಯನ್ನು ಮಾಡಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಈರುಳ್ಳಿಯ ದರ ಏರಿಕೆಯಾಗದಂತೆ ತಡೆಯಲು ಈ ದಾಸ್ತಾನು ಸಹಕಾರಿಯಾಗಲಿದೆ. ಬೆಳೆಗಾರರಿಗೂ ಇದು ಅನುಕೂಲಕರ.
ಆಗಸ್ಟ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿ ಈರುಳ್ಳಿಯ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತದೆ. ಆಗ ದಾಸ್ತಾನಿನಿಂದ ಈರುಳ್ಳಿ ಬಿಡುಗಡೆಯ ಮೂಲಕ ದರ ಗಗನಕ್ಕೇರದಂತೆ ನಿಯಂತ್ರಿಸಬಹುದು. ಹಣದುಬ್ಬರ ಈಗಾಗಲೇ ೭% ದಾಟಿರುವುದರಿಂದ ಇದು ನಿರ್ಣಾಯಕವಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ದರ ಸ್ಥಿರತೆ ನಿಧಿಯ ಅಡಿಯಲ್ಲಿ ಈರುಳ್ಳಿ ದಾಸ್ತಾನನ್ನು ನಿರ್ವಹಿಸುತ್ತಿದೆ. ಪೂರೈಕೆ ಕಡಿಮೆಯಾಗಿ ದರ ಏರಿಕೆಯ ಸನ್ನಿವೇಶ ಉಂಟಾದಾಗ ಇಲಾಖೆ ಮಧ್ಯಪ್ರವೇಶಿಸಲಿದೆ.
ಪ್ರತಿ ವರ್ಷ ಸೀಸನ್‌ಗೆ ಅನುಗುಣವಾಗಿ ಲಭ್ಯತೆಯ ಕೊರತೆಯಿಂದ ಕೆಲವು ವಸ್ತುಗಳ ದರಗಳಲ್ಲಿ ಏರಿಕೆಯಾಗುತ್ತದೆ. ಈರುಳ್ಳಿ ಕೂಡ ಅದರಲ್ಲಿ ಸೇರಿದೆ. ಈರುಳ್ಳಿ ದರ ಏರಿದಾಗ ಮನೆಯ ಖರ್ಚುವೆಚ್ಚಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಸರ್ಕಾರ ಈ ವರ್ಷ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶಗಳಲ್ಲಿ ರೈತರಿಂದ ಈರುಳ್ಳಿ ಖರೀದಿಸಿ ದಾಸ್ತಾನನ್ನು ವ್ಯವಸ್ಥೆ ಮಾಡಿದೆ.
ರೈತರಿಗೆ ಅವರ ಬೆಳೆಗೆ ಸೂಕ್ತ ಆದಾಯ ಹಾಗೂ ಅಭಾವದ ಕಾಲದಲ್ಲಿ ಗ್ರಾಹಕರಿಗೆ ಹೊರೆ ಆಗದಂತೆ ತಡೆಯುವುದು ಈ ದಾಸ್ತಾನಿನ ಉದ್ದೇಶವಾಗಿದೆ. ಈ ಹಿಂದಿನ ವರ್ಷಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಈರುಳ್ಳಿ ದರ ಏರುಗತಿಗೆ ತಿರುಗುತ್ತದೆ. ಹೊಸ ಕೊಯ್ಲು ಜನವರಿಯಲ್ಲಿ ಬರುವುದು ಇದಕ್ಕೆ ಕಾರಣ.
ಸರ್ಕಾರ ಮುಖ್ಯವಾಗಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ (NAFED) ಮೂಲಕ ರೈತರಿಂದ ಈರುಳ್ಳಿ ಖರೀದಿಸಿದೆ. ರೈತ ಉತ್ಪಾದಕ ಸಂಘಟನೆ (FPO) ಮೂಲಕವೂ ಖರೀದಿಸಲಾಗಿದೆ.