Site icon Vistara News

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಏಕಕಾಲಕ್ಕೆ 2 ವಿಮಾನಗಳ ಟೇಕಾಫ್‌, 100 ಅಡಿಯಲ್ಲಿ ತಪ್ಪಿದ್ದ ಅನಾಹುತ, ಸಿಬ್ಬಂದಿ ಸಸ್ಪೆಂಡ್

indigo

ಹೊಸದಿಲ್ಲಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ ಎರಡು ವಿಮಾನಗಳಿಗೆ ಟೇಕಾಫ್‌ ಆಗಲು ಅನುಮತಿ ಕೊಟ್ಟಿದ್ದರಿಂದ ಉಂಟಾಗಬಹುದಿದ್ದ ಅನಾಹುತ, ರಾಡಾರ್‌ ಕಂಟ್ರೋಲರ್‌ನ ಮಧ್ಯಪ್ರವೇಶದಿಂದ ತಪ್ಪಿದೆ. ಆಗ ಹಾರಾಟಕ್ಕೆ ಹೊರಟಿದ್ದ ಎರಡೂ ವಿಮಾನಗಳ ನಡುವೆ ಕೇವಲ 100 ಅಡಿಗಳ ಅಂತರವಿತ್ತು.

ಮೂರು ತಿಂಗಳಿನ ಹಿಂದೆ ಸಂಭವಿಸಿರುವ ಈ ಘಟನೆಗೆ ಸಂಬಂಧಿಸಿ ನಾಗರಿಕ ವಿಮಾನ ನಿರ್ದೇಶನಾಲಯವು ಒಬ್ಬ ಏರ್‌ ಟ್ರಾಫಿಕ್‌ ಕಂಟ್ರೋಲರ್‌ನ (ಎಟಿಸಿ) ಲೈಸೆನ್ಸ್‌ ಅನ್ನು ಮೂರು ತಿಂಗಳಿನ ಮಟ್ಟಿಗೆ ಸಸ್ಪೆಂಡ್‌ ಮಾಡಿದೆ.

ವಿಮಾನ ನಿಲ್ದಾಣದ ಎರಡು ರನ್‌ವೇಗಳಿಂದ ಏಕಕಾಲಕ್ಕೆ ಎರಡು ಇಂಡಿಗೊ ವಿಮಾನಗಳಿಗೆ ಟೇಕಾಫ್‌ ಆಗಲು ಅನುಮತಿ ನೀಡಲಾಗಿತ್ತು. ಇದರಿಂದ ಎರಡೂ ವಿಮಾನಗಳು ಢಿಕ್ಕಿಯಾಗಿ ಅವಘಡ ಸಂಭವಿಸುವುದರಲ್ಲಿತ್ತು. ಅದೃಷ್ಟವಶಾತ್‌ ರಾಡಾರ್‌ ಕಂಟ್ರೋಲರ್‌ನ ಮಧ್ಯಪ್ರವೇಶದಿಂದ ಅನಾಹುತ ತಪ್ಪಿತು ಎಂದು ವರದಿಯಾಗಿದೆ.

ಎರಡೂ ವಿಮಾನಗಳಲ್ಲಿ ನೂರಾರು ಮಂದಿ ಪ್ರಯಾಣಿಕರು ಇದ್ದರು. ಜನವರಿ 7 ರಂದು ಈ ಪ್ರಮಾದ ಸಂಭವಿಸಿತ್ತು. ಬೆಂಗಳೂರಿನಿಂದ ಕೋಲ್ಕೊತಾಗೆ ತೆರಳುತ್ತಿದ್ದ ಇಂಡಿಗೊ ವಿಮಾನ 6ಇ 455ಕ್ಕೆ ಟೇಕಾಫ್‌ ಆಗಲು ಏರ್‌ಪೋರ್ಟ್‌ನ ಸೌತ್‌ ಟವರ್‌ನಿಂದ ಕಂಟ್ರೋಲರ್‌ ಅನುಮತಿ ನೀಡಿದ. ಇದೇ ವೇಳೆಗೆ ನಾರ್ತ್‌ ಟವರ್‌ನಲ್ಲಿದ್ದ ಕಂಟ್ರೋಲರ್‌, ಇಂಡಿಗೊ 6ಇ 246 ವಿಮಾನಕ್ಕೆ (ಬೆಂಗಳೂರು-ಭುವನೇಶ್ವರ) ಕೂಡ ಟೇಕಾಫ್‌ ಆಗಲು ಅನುಮತಿ ನೀಡಿದ. ಇದಕ್ಕೂ ಮುನ್ನ ಈ ಕಂಟ್ರೋಲರ್‌, ಸೌತ್‌ ಟವರ್‌ ಅನ್ನು ಸಂಪರ್ಕಿಸಿರಲಿಲ್ಲ. ರಾಡಾರ್‌ ಕಂಟ್ರೋಲರ್‌ ಅನ್ನೂ ಕೇಳಿರಲಿಲ್ಲ.

ಎರಡೂ ವಿಮಾನಗಳು ಏಕಕಾಲಕ್ಕೆ ಹೊರಟು ಪರಸ್ಪರ ಸಮೀಪಿಸುತ್ತಿದ್ದಂತೆಯೇ, ರಾಡಾರ್‌ ಕಂಟ್ರೋಲರ್‌ ಸಂಭವನೀಯ ಅವಘಡವನ್ನು ತಪ್ಪಿಸಲು ಮಧ್ಯಪ್ರವೇಶಿಸಿತು. ವಿರುದ್ಧ ದಿಕ್ಕಿಗೆ ಚಲಿಸಲು ಸೂಚಿಸಿತು. ಆ ಹೊತ್ತಿಗೆ ಉಭಯ ವಿಮಾನಗಳ ಅಂತರ 1 ಸಾವಿರ ಅಡಿ ಇರಬೇಕಾಗಿದ್ದಲ್ಲಿ ಕೇವಲ 100 ಅಡಿಗೆ ಸಮೀಪಿಸಿತ್ತು. ಈ ಘಟನೆಯನ್ನು “ಗಂಭೀರ ಪ್ರಕರಣʼ ಎಂದು ಡಿಜಿಸಿಎ ಪರಿಗಣಿಸಿದೆ. ನಾರ್ತ್‌ ಟವರ್‌ನ ಕಂಟ್ರೋಲರ್‌ನ ಲೈಸೆನ್ಸ್‌ ಅನ್ನು ಮೂರು ತಿಂಗಳಿಗೆ ಸಸ್ಪೆಂಡ್‌ ಮಾಡಿದೆ.

ಒಂದು ವೇಳೆ ರಾಡಾರ್‌ ಕಂಟ್ರೋಲರ್‌ ಸಕಾಲದಲ್ಲಿ ಮಧ್ಯಪ್ರವೇಶಿಸದಿರುತ್ತಿದ್ದರೆ ಎರಡೂ ವಿಮಾನಗಳು ಆಕಾಶದಲ್ಲಿ ಢಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸುವ ಅಪಾಯ ಇತ್ತು.

Exit mobile version