Site icon Vistara News

2000 Notes Withdrawn : ಮೋದಿ 2,000 ರೂ. ನೋಟು ಬಯಸಿರಲಿಲ್ಲ: ಮಾಜಿ ಕಾರ್ಯದರ್ಶಿ ಹೇಳಿದ್ದೇನು?

PM Narendra Modi

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ 2016ರ ಡಿಮಾನಿಟೈಸೇಶನ್‌ ಸಂದರ್ಭ 2,000 ರೂ. ಮುಖಬೆಲೆಯ ನೋಟು ಬಿಡುಗಡೆ (2000 Notes Withdrawn) ಮಾಡುವುದು ಇಷ್ಟವಿರಲಿಲ್ಲ ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. (2016 Demonetisation)

ದಿನ ನಿತ್ಯದ ಬಳಕೆಗೆ 2,000 ರೂ. ನೋಟು ಹೊಂದುವುದಿಲ್ಲ. ಹೀಗಾಗಿ ಅದರ ಪರ ಪ್ರಧಾನಿಯವರಿಗೆ ಒಲವು ಇರಲಿಲ್ಲ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಆರ್‌ಬಿಐ ಕಳೆದ ಶುಕ್ರವಾರ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಅದರ ಸುತ್ತಮುತ್ತ ಭಾರಿ ಚರ್ಚೆ ನಡೆದಿದೆ. ಸರ್ಕಾರದ ನಿರ್ಧಾರ ಬೆಂಬಲಿಸಿರುವ ನೃಪೇಂದ್ರ ಮಿಶ್ರಾ, ಪ್ರಧಾನಿಯವರು ದೊಡ್ಡ ಮುಖಬೆಲೆಯ ನೋಟುಗಳನ್ನು ಇಷ್ಟಪಡುತ್ತಿರಲಿಲ್ಲ ಎಂದಿದ್ದಾರೆ.

ನೃಪೇಂದ್ರ ಮಿಶ್ರಾ

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳುವ ಪ್ರಕಾರ, 2016ರ ನವೆಂಬರ್‌ನಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದಾಗ ಅಷ್ಟು ಮೌಲ್ಯದ ಹಣವನ್ನು ವ್ಯವಸ್ಥೆಯಲ್ಲಿ ತ್ವರಿತವಾಗಿ ತುಂಬಲು 2,000 ರೂ. ನೋಟು ಬಿಡುಗಡೆಯ ಅನಿವಾರ್ಯತೆ ಇತ್ತು.

ನೃಪೇಂದ್ರ ಮಿಶ್ರಾ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಇದು ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ನೀಡಿರುವ ಹತಾಶೆಯ ಹೇಳಿಕೆ ಎಂದು ಹೇಳಿದ್ದಾರೆ. ಇನ್ನು ಮುಂದೆ ಸಲಹೆಗಾರರ ಮಾತು ಕೇಳಿ ಡಿಮಾನಿಟೈಸೇಶನ್‌ ಮಾಡಲಾಯಿತು ಎಂದೂ ಅವರು ಹೇಳಬಹುದು ಎಂದು ಟೀಕಿಸಿದ್ದಾರೆ.

ಚಿದಂಬರಂ ತರಾಟೆ:

2,000 ರೂ. ನೋಟನ್ನು ಬ್ಯಾಂಕ್‌ಗೆ ಜಮೆ ಮಾಡಿ ಬದಲಿಸಿಕೊಳ್ಳಲು ಯಾವುದೇ ಐಡಿ ಪ್ರೂಫ್‌ ಬೇಕಿಲ್ಲ ಎಂದಿದ್ದರೆ, ಕಾಳ ಧನಿಕರು ಸುಲಭವಾಗಿ ವರ್ಗಾಯಿಸಬಹುದಲ್ಲವೇ? ಇದರೊಂದಿಗೆ ಕಪ್ಪುಹಣ ತರುವ ಸರ್ಕಾರದ ಉದ್ದೇಶ ವಿಫಲವಾಗಿದೆ ಎಂದು ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಜನ ಸಾಮಾನ್ಯರು 2,000 ರೂ. ನೋಟನ್ನು ಹೊಂದಿಲ್ಲ, ಹಾಗಿದ್ದರೆ ಯಾರ ಬಳಿ ಇದೆ? ನಿಮಗೆ ಅದು ಗೊತ್ತಿರಬೇಕು ಎಂದು ಪಿ.ಚಿದಂಬರಂ ಹೇಳಿದ್ದಾರೆ.

Exit mobile version