ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಎಲ್ಲ ಬ್ಯಾಂಕ್‌ಗಳಿಗೆ ನೀಡಿರುವ ಸೂಚನೆಯೊಂದರಲ್ಲಿ, 2,000 ರೂ. ನೋಟು ಬದಲಿಸಲು ಶಾಖೆಗಳಿಗೆ (2000 Notes Withdrawn) ಬರುವವರಿಗೆ ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ.
2016ರಲ್ಲಿ ನೋಟು ಬ್ಯಾನ್ ಆಗಿದ್ದಾಗ ಬ್ಯಾಂಕ್ ಶಾಖೆಗಳಲ್ಲಿ ಉದ್ದನೆಯ ಕ್ಯೂ ಉಂಟಾಗಿತ್ತು. ಹಲವು ಮಂದಿ ಸರದಿಯಲ್ಲಿ ನಿಂತು ಬಳಲಿ ನಿತ್ರಾಣರಾಗಿದ್ದರು. ಕೆಲವರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಆರ್‌ಬಿಐ ಮುತುವರ್ಜಿ ವಹಿಸಿದೆ. ಹಾಗೂ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಆರ್‌ಬಿಐ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದ್ದರೂ, ಕಾನೂನು ಮಾನ್ಯತೆ ಮುಂದುವರಿಯಲಿದೆ. ಜತೆಗೆ 2,000 ರೂ. ನೋಟುಗಳ ಸಂಖ್ಯೆಯೂ ಕಡಿಮೆ. ಆದ್ದರಿಂದ 2016ರ ಪರಿಸ್ಥಿತಿ ಇಲ್ಲವಾಗಿದ್ದರೂ, ಆರ್‌ಬಿಐ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ.
ಬೇಸಗೆಯ ಸಮಯವಾದ್ದರಿಂದ ಬ್ಯಾಂಕ್ ಶಾಖೆಗಳಲ್ಲಿ ನೀರು-ನೆರಳಿನ ವ್ಯವಸ್ಥೆಯನ್ನು ಜನತೆಗೆ ಒದಗಿಸಬೇಕು ಎಂದು ಆರ್‌ಬಿಐ ತಿಳಿಸಿದೆ. 2,000 ರೂ. ನೋಟುಗಳ ಬಗ್ಗೆ ದಿನ ನಿತ್ಯ ಅಂಕಿ ಅಂಶಗಳನ್ನು ಕಾಯ್ದಿರಿಸುವಂತೆ ಸೂಚಿಸಿದೆ.
ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ:
ಒಂದು ಸಲಕ್ಕೆ ಯಾವುದೇ ಪ್ರೂಫ್ ಇಲ್ಲದೆಯೇ 20,000 ರೂ. ತನಕದ ಮೌಲ್ಯದ ತನಕ 2,000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಬಹುದು ಎಂಬ ಆರ್‌ಬಿಐ ಸೂಚನೆ ವಿರುದ್ಧ ದಿಲ್ಲಿಯಲ್ಲಿ ವಕೀಲರೊಬ್ಬರು ಕೇಸ್ ದಾಖಲಿಸಿದ್ದಾರೆ. ವಕೀಲ ಹಾಗೂ ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ರಿಕ್ವೆಸಿಶನ್ ಸ್ಲಿಪ್ ಮತ್ತು ಐಡೆಂಟಿಟಿ ಕೂಡ ಇಲ್ಲದೆ 2,000 ರೂ. ನೋಟಿನ ವಿನಿಮಯ ನಿರ್ಧಾರ ಏಕಪಕ್ಷೀಯ ಹಾಗೂ ಅತಾರ್ಕಿಕ ಎಂದು ಅಶ್ವಿನಿ ಉಪಾಧ್ಯಾಯ ತಿಳಿಸಿದ್ದಾರೆ.
1,000 ರೂ. ನೋಟನ್ನು ಮತ್ತೆ ಬಿಡುಗಡೆಗೊಳಿಸುವ ಪ್ರಸ್ತಾಪ ಆರ್‌ಬಿಐ ಮುಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಅಂಥ ಯಾವುದೇ ಪ್ರಸ್ತಾಪ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 2000 Notes Withdrawn : 2,000 ರೂ. ನೋಟು ವಿನಿಮಯಕ್ಕೆ ಯಾವುದೇ ಐಡಿ ಪ್ರೂಫ್, ಸ್ಲಿಪ್ ಬೇಡ: ಎಸ್‌ಬಿಐ