Site icon Vistara News

2000 Notes Withdrwan : ನೋಟು ಬದಲಿಸಲು ಯಾವುದೇ ದಾಖಲೆ, ಅರ್ಜಿ ಬೇಕಿಲ್ಲ: ಬ್ಯಾಂಕ್‌ಗಳು ಹೇಳಿದ್ದೇನು?

2000 Notes

ನವ ದೆಹಲಿ: ಆರ್‌ಬಿಐ ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಿಸಲು ಮೇ 23ರಿಂದ ವ್ಯವಸ್ಥೆ ಕಲ್ಪಿಸಲಾಗಿದೆ. (2000 Notes Withdrwan) ಜನತೆ ಯಾವುದೇ ದಾಖಲೆಯ ಅಗತ್ಯ ಇಲ್ಲದೆಯೇ 2000 ರೂ. ನೋಟುಗಳನ್ನು ಬದಲಿಸಬಹುದು ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (Punjab National Bank) ಮಂಗಳವಾರ ತಿಳಿಸಿದೆ. 2023ರ ಸೆಪ್ಟೆಂಬರ್‌ 30 ತನಕ ವಿನಿಮಯ ಮಾಡಬಹುದು. ಬಳಿಕ ಕೂಡ ನೋಟಿಗೆ ಮಾನ್ಯತೆ ಇರುತ್ತದೆ.

ಆಧಾರ್‌ ಕಾರ್ಡ್‌ ಅಥವಾ ಯಾವುದೇ ಅಧಿಕೃತ ವೆರಿಫೈಡ್‌ ಡಾಕ್ಯುಮೆಂಟ್ಸ್‌ ಅಗತ್ಯ ಇಲ್ಲ. ಯಾವುದೇ ಅರ್ಜಿಯನ್ನೂ ಭರ್ತಿ ಮಾಡಬೇಕಾಗಿಲ್ಲ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಿಳಿಸಿದೆ. ಆದರೆ ಒಂದು ಸಲಕ್ಕೆ ಒಟ್ಟು 20,000 ರೂ. ಮೌಲ್ಯದ 2,000 ರೂ. ನೋಟುಗಳಿಗೆ ಇದು ಅನ್ವಯವಾಗುತ್ತದೆ.

ಇದನ್ನೂ ಓದಿ: 2000 Notes Withdrawn : ಹೊರಬಿದ್ದ 2,000 ರೂ. ನೋಟು, ಚಲಾವಣೆಯಾಗುತ್ತಿರುವುದು ಎಲ್ಲಿ?!

ಈ ಹಿಂದೆ ಬ್ಯಾಂಕ್‌ ಕೆಲವು ಹೆಚ್ಚುವರಿ ಮಾಹಿತಿಗಳನ್ನು ನಿರೀಕ್ಷಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅಂಥ ಯಾವುದೇ ಕ್ರಮ ಇಲ್ಲ ಎಂದು ತಿಳಿಸಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ (SBI) 2000 ರೂ. ನೋಟು ವಿನಿಮಯಕ್ಕೆ ಯಾವುದೇ ಅರ್ಜಿ ಬೇಕಿಲ್ಲ ಎಂದು ತಿಳಿಸಿದೆ.

ನೀರು-ನೆರಳಿನ ವ್ಯವಸ್ಥೆಗೆ ಸೂಚನೆ:

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ಎಲ್ಲ ಬ್ಯಾಂಕ್‌ಗಳಿಗೆ ನೀಡಿರುವ ಸೂಚನೆಯೊಂದರಲ್ಲಿ, 2,000 ರೂ. ನೋಟು ಬದಲಿಸಲು ಶಾಖೆಗಳಿಗೆ (2000 Notes Withdrawn) ಬರುವವರಿಗೆ ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ.

2016ರಲ್ಲಿ ನೋಟು ಬ್ಯಾನ್‌ ಆಗಿದ್ದಾಗ ಬ್ಯಾಂಕ್‌ ಶಾಖೆಗಳಲ್ಲಿ ಉದ್ದನೆಯ ಕ್ಯೂ ಉಂಟಾಗಿತ್ತು. ಹಲವು ಮಂದಿ ಸರದಿಯಲ್ಲಿ ನಿಂತು ಬಳಲಿ ನಿತ್ರಾಣರಾಗಿದ್ದರು. ಕೆಲವರು ಮೃತಪಟ್ಟಿದ್ದಾರೆ ಎಂದೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಆರ್‌ಬಿಐ ಮುತುವರ್ಜಿ ವಹಿಸಿದೆ. ಹಾಗೂ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಆರ್‌ಬಿಐ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದ್ದರೂ, ಕಾನೂನು ಮಾನ್ಯತೆ ಮುಂದುವರಿಯಲಿದೆ. ಜತೆಗೆ 2,000 ರೂ. ನೋಟುಗಳ ಸಂಖ್ಯೆಯೂ ಕಡಿಮೆ. ಆದ್ದರಿಂದ 2016ರ ಪರಿಸ್ಥಿತಿ ಇಲ್ಲವಾಗಿದ್ದರೂ, ಆರ್‌ಬಿಐ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ.

ಬೇಸಗೆಯ ಸಮಯವಾದ್ದರಿಂದ ಬ್ಯಾಂಕ್‌ ಶಾಖೆಗಳಲ್ಲಿ ನೀರು-ನೆರಳಿನ ವ್ಯವಸ್ಥೆಯನ್ನು ಜನತೆಗೆ ಒದಗಿಸಬೇಕು ಎಂದು ಆರ್‌ಬಿಐ ತಿಳಿಸಿದೆ. 2,000 ರೂ. ನೋಟುಗಳ ಬಗ್ಗೆ ದಿನ ನಿತ್ಯ ಅಂಕಿ ಅಂಶಗಳನ್ನು ಕಾಯ್ದಿರಿಸುವಂತೆ ಸೂಚಿಸಿದೆ.

Exit mobile version