Site icon Vistara News

ಕೆನರಾ ಬ್ಯಾಂಕ್‌ಗೆ ಏಪ್ರಿಲ್-ಜೂನ್‌ ಅವಧಿಯಲ್ಲಿ 2,022 ಕೋಟಿ ರೂ. ನಿವ್ವಳ ಲಾಭ, 72% ಹೆಚ್ಚಳ

canara bank

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ೨,೦೨೨ ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ೨೦೨೧ರ ಇದೇ ಅವಧಿಯಲ್ಲಿ ಬ್ಯಾಂಕ್‌ ೧,೧೭೭ ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಅಂದರೆ ೭೨% ಹೆಚ್ಚಳ ದಾಖಲಿಸಿದೆ.

ಏಪ್ರಿಲ್-ಜೂನ್‌ನಲ್ಲಿ ಕೆನರಾ ಬ್ಯಾಂಕ್‌ನ ನಿರ್ವಹಣಾ ಲಾಭ ೬,೬೦೬ ಕೋಟಿ ರೂ.ಗಳಾಗಿದ್ದು, ೨೧% ಏರಿಕೆಯಾಗಿತ್ತು. ಬಡ್ಡಿಯೇತರ ಆದಾಯ ೨೪.೫೫% ವೃದ್ಧಿಸಿತ್ತು. ಶುಲ್ಕ ಆಧಾರಿತ ಆದಾಯ ೧೮% ಹೆಚ್ಚಳವಾಗಿತ್ತು. ಬ್ಯಾಂಕ್‌ನ ಜಾಗತಿಕ ಬಿಸಿನೆಸ್‌ ೧೧.೪೫ ಹೆಚ್ಚಳವಾಗಿತ್ತು. ಒಟ್ಟಾರೆ ಮುಂಗಡದಲ್ಲಿ ೧೫% ಹೆಚ್ಚಳವಾಗಿತ್ತು. ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ವಿತರಣೆ ೧೮% ವೃದ್ಧಿಸಿತ್ತು. ರಿಟೇಲ್‌ ಸಾಲ ವಿತರಣೆ ೧೨% ಹೆಚ್ಚಳವಾಗಿತ್ತು. ಚಿನ್ನದ ಸಾಲ ೨೬% ವೃದ್ಧಿಸಿತ್ತು. ೧ ಲಕ್ಷ ಕೋಟಿ ರೂ.ಗಳ ಮೈಲುಗಲ್ಲನ್ನು ದಾಟಿತ್ತು. ಒಟ್ಟಾರೆ ಎನ್‌ಪಿಎಯಲ್ಲಿ ೧.೫೨% ಇಳಿಕೆಯಾಗಿತ್ತು.

೯೭೩೨ ಶಾಖೆಗಳು: ಕೆನರಾ ಬ್ಯಾಂಕ್‌ ೨೦೨೨ರ ಜೂನ್‌ ೩೦ರ ವೇಳೆಗೆ ೯೭೩೨ ಶಾಖೆಗಳನ್ನು ಒಳಗೊಂಡಿತ್ತು. ಇದರಲ್ಲಿ ೩೦೪೧ ಗ್ರಾಮೀಣ, ೨೭೫೧ ಪಟ್ಟಣ, ೧೯೯೭ ನಗರ, ೧೯೫೩ ಶಾಖೆಗಳು ಮಹಾ ನಗರಗಳಲ್ಲಿ ಇವೆ. ೧೦೮೦೨ ಎಟಿಎಂಗಳನ್ನು ಒಳಗೊಂಡಿದೆ. ಲಂಡನ್‌, ದುಬೈ ಮತ್ತು ನ್ಯೂಯಾರ್ಕ್‌ನಲ್ಲಿ ಸಾಗರೋತ್ತರ ಶಾಖೆ ಇದೆ.

ಎಲ್.ವಿ ಪ್ರಭಾಕರ್‌, ಎಂ.ಡಿ ಮತ್ತು ಸಿಇಒ, ಕೆನರಾ ಬ್ಯಾಂಕ್

“ಕೆನರಾ ಬ್ಯಾಂಕ್‌ನ ಬಡ್ಡಿ ಆದಾಯ, ಸ್ವತ್ತುಗಳ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದೆ. ಹೀಗಾಗಿ ಮುಂಬರುವ ತ್ರೈಮಾಸಿಕದಲ್ಲೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗಿದೆʼʼ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಲ್.ವಿ ಪ್ರಭಾಕರ್‌ ತಿಳಿಸಿದ್ದಾರೆ.

ಕೆನರಾ ಬ್ಯಾಂಕ್‌ನ ಜಾಗತಿಕ ವ್ಯವಹಾರ ಕಳೆದ ಏಪ್ರಿಲ್-ಜೂನ್‌ನಲ್ಲಿ ೧೨% ಏರಿದ್ದು, ೧೯ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟಾರೆ ಎನ್‌ಪಿಎ ೭.೫೧%ರಿಂದ ೬.೯೮%ಕ್ಕೆ ಇಳಿಕೆಯಾಗಿದೆ.

ಕೆನರಾ ಬ್ಯಾಂಕ್‌ ತನ್ನ ನೂತನ ಮೊಬೈಲ್‌ ಬ್ಯಾಂಕಿಂಗ್‌ ಸೂಪರ್‌ ಆ್ಯಪ್ ” Canara ai ೧ʼ ಅನ್ನು ಬಿಡುಗಡೆಗೊಳಿಸಿದೆ. ೨೫೦ಕ್ಕೂ ಹೆಚ್ಚು ಫೀಚರ್‌ಗಳನ್ನು ಒಳಗೊಂಡಿದೆ. ಹಾಗೂ ೧೧ ಭಾಷೆಗಳಲ್ಲಿ ಲಭ್ಯವಿದೆ. ಇದರ ಮೂಲಕ ಬ್ಯಾಂಕಿಂಗ್‌ ಮತ್ತು ನಿತ್ಯೋಪಯೋಗಿ ಸೇವೆಗಳನ್ನು ಬಳಸಿಕೊಳ್ಳಬಹುದು. ನಾನಾ ಬಗೆಯ ಬಿಲ್‌ಗಳನ್ನು ಪಾವತಿಸಬಹುದು. ಮ್ಯೂಚುವಲ್‌ ಫಂಡ್‌, ವಿಮೆ, ಡಿಮ್ಯಾಟ್‌ ಸೇವೆಯನ್ನೂ ಪಡೆಯಬಹುದು ಎಂದು ಬ್ಯಾಂಕ್‌ ತಿಳಿಸಿದೆ.

Exit mobile version