ನವ ದೆಹಲಿ: ಸೇನೆಯ ನೂತನ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪರಿಣಾಮ ರೈಲ್ವೆಯ ಆಸ್ತಿಪಾಸ್ತಿಗಳಿಗೆ ೨೫೯ ಕೋಟಿ ರೂ. ನಷ್ಟವಾಗಿದೆ. ೨,೦೦೦ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದ್ದಾರೆ.
ಅಗ್ನಿಪಥ್ ವಿರುದ್ಧದ ಪ್ರತಿಭಟನೆಯ ಸಂದರ್ಭ ರದ್ದುಪಡಿಸಿದ್ದ ಎಲ್ಲ ರೈಲುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಜೂನ್ ೧೫ ಮತ್ತು ೨೩ರ ನಡುವೆ ೨,೧೩೨ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶದ ಕೆಲವು ಕಡೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ರೈಲುಗಳಿಗೆ ಬೆಂಕಿ ಹಚ್ಚುವುದು, ಕಲ್ಲು ತೂರಾಟ ನಡೆಸುವುದು, ರೈಲ್ವೆ ನಿಲ್ದಾಣಕ್ಕೆ ದಾಳಿಯ ಮೂಲಕ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು.
ರೈಲ್ವೆ ಸಂಚಾರಗಳಲ್ಲಿನ ವ್ಯತ್ಯಯದ ಬಾಬ್ತು ಒಟ್ಟು ಅಂದಾಜು ೧೦೨ ಕೋಟಿ ರೂ.ಗಳನ್ನು ರೈಲ್ವೆ ಪ್ರಯಾಣಿಕರಿಗೆ ರಿಫಂಡ್ ಮಾಡಲಾಗಿದೆ ಎಂದರು.