Site icon Vistara News

Business success | ಜ್ಯೋತಿಷ್ಯ ನಂಬಿರದ ಯುವಕನ ಭವಿಷ್ಯ ರೂಪಿಸಿದ ಆನ್‌ಲೈನ್‌ ಆಸ್ಟ್ರಾಲಜಿ ಸ್ಟಾರ್ಟಪ್!

puneet gupta

ಪಂಜಾಬ್‌ ಮೂಲದ ಮಧ್ಯಮ ವರ್ಗದ ಕುಟುಂಬದ ಪುನೀತ್‌ ಗುಪ್ತಾ ಎಂಬ ಯುವಕನಿಗೆ ಆರಂಭದಲ್ಲಿ ಭವಿಷ್ಯ, ಜಾತಕ ಇತ್ಯಾದಿಗಳಲ್ಲಿ ನಂಬಿಕೆ ಇದ್ದಿರಲಿಲ್ಲ.

ಪಂಜಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಟೆಕ್‌ ಪದವಿ ಪಡೆದ ಬಳಿಕ ಮುಂಬಯಿನಲ್ಲಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ನೊಮುರಾದಲ್ಲಿ ಎರಡೂವರೆ ವರ್ಷಗಳ ಕಾಲ ಉದ್ಯೋಗಿಯಾಗಿದ್ದ. ಬಳಿಕ ಆಯುರ್ವೇದ ವಲಯದಲ್ಲಿ ಒಂದು ಸ್ಟಾರ್ಟಪ್‌ ಮಾಡಲು ಹೊರಟ. ಆದರೆ ಸಕ್ಸಸ್‌ ಆಗಲಿಲ್ಲ. ಬಳಿಕ ಸ್ನೇಹಿತರ ಜತೆ ಸೇರಿ ಐಟಿ ಕಂಪನಿಯೊಂದನ್ನು ಕಟ್ಟಲು ಹೊರಟ. ಆ ಸಂದರ್ಭದಲ್ಲಿ ಸ್ವತಃ ಜ್ಯೋತಿಷ್ಯ ಬಲ್ಲ ಸಹೋದ್ಯೋಗಿಯೊಬ್ಬರ ಸಲಹೆ ಮೇರೆಗೆ ಅವರಿಗೆ ಜನ್ಮ ದಿನಾಂಕ ವಿವರ ನೀಡಿದ. ಜಾತಕ ಪರಿಶೀಲಿಸಿದ ಆಕೆ, ” ೨ ವರ್ಷ ಚೆನ್ನಾಗಿ ಐಟಿ ಕೆಲಸ ಮಾಡುತ್ತೀಯಾ, ಆದರೆ ಬಳಿಕ ಸಮಸ್ಯೆ ಆಗಬಹುದುʼʼ ಎಂದಳು. ಆ ಭವಿಷ್ಯ ನಿಜವಾಯಿತು. ಎರಡು ವರ್ಷ ಚೆನ್ನಾಗಿ ನಡೆದ ಐಟಿ ಕಂಪನಿ ಬಳಿಕ ಮುಗ್ಗರಿಸಿತು. ಬಳಿಕ ಮತ್ತೆ ಸಹೋದ್ಯೋಗಿ ಬಳಿಕ ತೆರಳಿ ಹೀಗೆಲ್ಲ ಆಯಿತು ಎಂದು ವಿವರಿಸಿದ. ಮಾತುಕತೆ ವೇಳೆ ಜ್ಯೋತಿಷ್ಯ ಸೇವೆಯನ್ನು ನೀಡುವ ಮೊಬೈಲ್‌ ಆ್ಯಪ್ ಅನ್ನು ಆರಂಭಿಸುವ ಯೋಚನೆ ಹೊಳೆಯಿತು. ಇದುವೇ ಆನ್‌ಲೈನ್‌ ಮೂಲಕ ನುರಿತ ಜ್ಯೋತಿಷ್ಯರಿಂದ ಆಸ್ಟ್ರಾಲಜಿ ಸೇವೆಯನ್ನು (ಭವಿಷ್ಯ) ನೀಡುವ ಆಸ್ಟ್ರೊ ಟಾಕ್‌ ಸ್ಥಾಪನೆಗೆ ಹಾದಿ ಸುಗಮಗೊಳಿಸಿತು.

ಹೀಗೆ ೨೦೧೭ರ ಅಕ್ಟೋಬರ್‌ನಲ್ಲಿ ಆರಂಭವಾದ ಆಸ್ಟ್ರೊ ಟಾಕ್‌ (Astrotalk) ಈಗ ೨,೫೦೦ಕ್ಕೂ ಹೆಚ್ಚು ಜ್ಯೋತಿಷ್ಯಜ್ಞರ ನೆಟ್‌ ವರ್ಕ್‌ ಅನ್ನು ಹೊಂದಿದೆ. ಇದುವರೆಗೆ ೨ ಕೋಟಿಗೂ ಹೆಚ್ಚು ಮಂದಿಗೆ ಜ್ಯೋತಿಷ್ಯ ಸೇವೆಯನ್ನು ಒದಗಿಸಿದೆ. ವರದಿಗಳ ಪ್ರಕಾರ ಪುನೀತ್‌ ಗುಪ್ತಾ ಅವರ ಆಸ್ಟ್ರೋಟಾಕ್‌ ಈಗ ದಿನಕ್ಕೆ ಸರಾಸರಿ ೪೦ ಲಕ್ಷ ರೂ. ಆದಾಯವನ್ನು ಗಳಿಸುತ್ತಿದೆ. ಭಾರತದ ಸ್ಟಾರ್ಟಪ್‌ ವಲಯದಲ್ಲಿ ಇದು ಅಪರೂಪದ್ದು. ಅಧಿಕೃತ ಜ್ಯೋತಿಷ್ಯಜ್ಞರು ಮತ್ತು ಸೇವೆಯನ್ನು ಬಯಸುವವರನ್ನು ಆ್ಯಪ್ ಮೂಲಕ ಒಂದುಗೂಡಿಸುತ್ತದೆ. ಚಾಟ್‌ ಅಥವಾ ಆಡಿಯೊ ಕರೆ ಮೂಲಕ ಜ್ಯೋತಿಷ್ಯಜ್ಞರ ಜತೆ ಮಾತುಕತೆ ನಡೆಸಬಹುದು.

ಜ್ಯೋತಿಷ್ಯ ಶಾಸ್ತ್ರ ಜಗತ್ತಿಗೆ ಭಾರತದ ಅತ್ಯುತ್ತಮ ಕೊಡುಗೆ. ಜನತೆಗೆ ನುರಿತ ಜ್ಯೋತಿಷ್ಯಜ್ಞರ ಸೇವೆಯನ್ನು ತಲುಪಿಸುವುದು ಉದ್ದೇಶ. ಗ್ರಾಹಕರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರವನ್ನು ಆಸ್ಟ್ರೋಟಾಕ್‌ ನೀಡುತ್ತದೆ. ಒಂದು ವೇಳೆ ನೆಟ್‌ ವರ್ಕ್‌ನಲ್ಲಿರುವ ಜ್ಯೋತಿಷ್ಯ ಶಾಸ್ತ್ರಜ್ಞರು ಯಾವುದೇ ಅಕ್ರಮ ಎಸಗಿರುವುದು ಪತ್ತೆಯಾದರೆ, ಅಂಥವರನ್ನು ನೆಟ್‌ ವರ್ಕ್‌ನಿಂದ ಹೊರಗಿಡಲಾಗುವುದು ಎನ್ನುತ್ತಾರೆ ಪುನೀತ್‌ ಗುಪ್ತಾ.

ಕೋವಿಡ್-‌೧೯ ಬಿಕ್ಕಟ್ಟಿನ ಸಂದರ್ಭ ಬೇಡಿಕೆ: ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಎಲ್ಲೆಡೆ ಅನಿಶ್ಚಿತತೆ ಕವಿದಿತ್ತು. ಅನೇಕ ಮಂದಿ ಕಂಡು ಕೇಳರಿಯದ ಕೋವಿಡ್‌ ವಿಪತ್ತಿಗೆ ತತ್ತರಿಸಿದರು. ಎಷ್ಟೋ ಮಂದಿ ಭವಿಷ್ಯದ ಬಗ್ಗೆ ಅರಿತುಕೊಳ್ಳಲು ಆಗ ಜ್ಯೋತಿಷ್ಯವನ್ನು ಆಶ್ರಯಿಸಿದ್ದರು. ಆಸ್ಟ್ರೋಟಾಕ್‌ನ ಆದಾಯವೂ ವೃದ್ಧಿಸಿತು.

” ನಮ್ಮ ದೇಶದಲ್ಲಿ ಜ್ಯೋತಿಷ್ಯ ಹೇಳುವವರು ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ವಂಚಿಸಬಹುದು. ಅದು ಜ್ಯೋತಿಷ್ಯ ಶಾಸ್ತ್ರದ ತಪ್ಪಲ್ಲ. ಕೆಲವರು ಅಂಗೈ ನೋಡಿ ಭವಿಷ್ಯ ಹೇಳುತ್ತಾರೆ. ಆದರೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಹಾಗೂ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಯಾವುದೇ ಸ್ಟಾರ್ಟಪ್‌ ಅಥವಾ ಕೆಲಸ ಯಶಸ್ವಿಯಾಗುವುದಿಲ್ಲ. ನಮ್ಮ ದೇಶದಲ್ಲಿ ಜನ ತಮ್ಮ ಭವಿಷ್ಯದ ಬಗ್ಗೆ, ನಾನಾ ಸಮಸ್ಯೆಗಳ ಬಗ್ಗೆ ಸಲಹೆ ಪಡೆಯಬಯಸುತ್ತಾರೆ. ಅವರ ಸಮಸ್ಯೆಗಳನ್ನು ಅರಿತು ಜ್ಯೋತಿಷ್ಯದ ನೆರವಿನಿಂದ ಸಲಹೆಯನ್ನು, ಸಮಾಧಾನವನ್ನು ನೀಡಬಹುದು. ಹೀಗಾಗಿ ಜ್ಯೋತಿಷ್ಯ ಬಲ್ಲವರಿಗೆ ಆ್ಯಪ್ ಬಳಕೆ ಬಗ್ಗೆ ತರಬೇತಿ ನೀಡುತ್ತೇವೆ. ನನ್ನ ಟೀಮ್‌ ಜತೆ ಪ್ರತಿಯೊಂದನ್ನೂ ದಾಖಲಿಸುತ್ತೇವೆ ಎನ್ನುತ್ತಾರೆ‌ ಪುನೀತ್‌ ಗುಪ್ತಾ.

ಇದನ್ನೂ ಓದಿ: Business success | ಮೂವರು ಸ್ನೇಹಿತರು 2 ಲಕ್ಷ ರೂ.ಗೆ ಶುರು ಮಾಡಿದ ಬೇಕರಿಯ 75 ಕೋಟಿ ರೂ. ಬಿಸಿನೆಸ್!

Exit mobile version