Site icon Vistara News

PM ಫಸಲ್‌ ಬಿಮಾ| ವಿಮೆ ಕಂಪನಿಗಳಿಗೆ 5 ವರ್ಷಗಳಲ್ಲಿ 40,000 ಕೋಟಿ ರೂ. ಗಳಿಕೆ

crop insurence

ನವ ದೆಹಲಿ: ವಿಮೆ ಕಂಪನಿಗಳು ಕಳೆದ ೫ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಾದ ಪಿಎಂ ಫಸಲ್‌ ಬಿಮಾದಲ್ಲಿ ೪೦,೦೦೦ ಕೋಟಿ ರೂ. ಗಳಿಕೆಯನ್ನು ತಮ್ಮದಾಗಿಸಿವೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು (PMFBY) ೨೦೧೬-೧೭ರಿಂದ ಆರಂಭಿಸಲಾಗಿದೆ. ಅಲ್ಲಿಂದ ೨೦೨೧-೨೨ರ ತನಕದ ಅವಧಿಯಲ್ಲಿ ವಿಮೆ ಕಂಪನಿಗಳು ೪೦,೦೦೦ ಕೋಟಿ ರೂ.ಗಳನ್ನು ಗಳಿಸಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರಾಜ್ಯ ಸಭೆಗೆ ತಿಳಿಸಿದ್ದಾರೆ.‌

ಕಳೆದ ೫ ವರ್ಷಗಳಲ್ಲಿ ವಿಮೆ ಕಂಪನಿಗಳು ಪಿಎಂ ಫಸಲ್‌ ಬಿಮಾ ಯೋಜನೆಯ ಅಡಿಯಲ್ಲಿ ೧,೧೯,೩೧೪ ಕೋಟಿ ರೂ.ಗಳ ಕೋಟಿ ರೂ.ಗಳ ವಿಮೆ ಪರಿಹಾರವನ್ನು ವಿತರಿಸಿವೆ. ಇದೇ ಸಂದರ್ಭ ೧,೫೯,೧೩೨ ಕೋಟಿ ರೂ.ಗಳ ಪ್ರೀಮಿಯಂ ಅನ್ನು ಸಂಗ್ರಹಿಸಿವೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಅನುಷ್ಠಾನವನ್ನು ೧೮ ಸಾಮಾನ್ಯ ವಿಮೆ ಕಂಪನಿಗಳು ವಹಿಸಿಕೊಂಡಿವೆ. ಯೋಜನೆ ಆರಂಭವಾದಂದಿನಿಂದ ೨೦೨೧-೨೨ರ ತನಕ ಈ ಯೋಜನೆ ಅಡಿಯಲ್ಲಿ ಪ್ರತಿ ಹೆಕ್ಟೇರ್‌ಗೆ ೪,೧೯೦ ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ತಿಳಿಸಿದರು. ಆಹಾರ ಬೆಳೆಗಳು, ಎಣ್ಣೆ ಕಾಳುಗಳ ಬೆಳೆ, ವಾಣಿಜ್ಯ ಬೆಳೆಗಳನ್ನು ಈ ಯೋಜನೆ ಒಳಗೊಂಡಿದೆ. ವಿಮೆಯ ಕಂತಿಗೆ ರೈತರು ಮುಂಗಾರು ಬೆಳೆಗೆ ೨% ಮತ್ತು ಹಿಂಗಾರು ಬೆಳೆಗೆ ೧.೫% ಹಾಗೂ ವಾರ್ಷಿಕ ಮತ್ತು ವಾಣಿಜ್ಯ ಬೆಲೆಗೆ ೫% ವಿಮೆಯ ವೆಚ್ಚವನ್ನು ಪಾವತಿಸಬೇಕಾಗುತ್ತದೆ.

Exit mobile version