ನವ ದೆಹಲಿ: ಚೀನಾ ಮೂಲದ ಮೊಬೈಲ್ ಉತ್ಪಾದಕ, ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಭಾಗವಾಗಿರುವ ಒಪ್ಪೊ ಇಂಡಿಯಾ ಕಂಪನಿಯು ೪,೩೮೯ ಕೋಟಿ ರೂ. ತೆರಿಗೆ ವಂಚನೆ ಎಸಗಿರುವುದು ಬಯಲಾಗಿದೆ.
ಕಂದಾಯ ವಿಚಕ್ಷಣ ದಳ (ಡಿಆರ್‌ಐ) ಒಪ್ಪೊ ಇಂಡಿಯಾದ ಕಚೇರಿಗಳ ಮೇಲೆ ನಡೆಸಿದ ದಾಳಿಯ ಬಳಿಕ, ಕಸ್ಟಮ್ಸ್ ಸುಂಕ ಪಾವತಿಸದೆ ವಂಚಿಸಿರುವುದು ಗೊತ್ತಾಗಿದೆ. ಜಾರಿ ನಿರ್ದೇಶನಾಲಯವು ವಿವೊ ಮತ್ತು ಅದಕ್ಕೆ ಸಂಬಂಧಿಸಿದ ಕಂಪನಿಗಳ ಮೇಲೆ ಇತ್ತೀಚೆಗೆ ೪೦ ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಈ ತಪಾಸಣೆಯಲ್ಲಿ ವಿವೊ ತೆರಿಗೆ ತಪ್ಪಿಸಲು ತನ್ನ ವಹಿವಾಟಿನಲ್ಲಿ ೫೦%ರಷ್ಟನ್ನು ( ೬೨,೪೭೬ ಕೋಟಿ ರೂ.) ಚೀನಾಕ್ಕೆ ರವಾನಿಸಿದ್ದನ್ನು ಪತ್ತೆ ಹಚ್ಚಿತ್ತು. ಇದಾದ ಬಳಿಕ ಡಿಆರ್‌ಐ, ಒಪ್ಪೊ ಇಂಡಿಯಾದ ವಹಿವಾಟುಗಳ ಬಗ್ಗೆ ತನಿಖೆ ನಡೆಸಿದೆ. ಹಾಗೂ ೪,೩೮೯ ಕೋಟಿ ರೂ. ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಒಪ್ಪೊ ಇಂಡಿಯಾವು ಮೊಬೈಲ್ ಉತ್ಪಾದನೆ, ಜೋಡಣೆ, ಸಗಟು ಮಾರಾಟ, ವಿತರಣೆ, ಬಿಡಿಭಾಗಗಳ ಮಾರಾಟ ಇತ್ಯಾದಿ ವಹಿವಾಟುಗಳನ್ನು ಭಾರತದಲ್ಲಿ ನಡೆಸುತ್ತಿದೆ. ಒಪ್ಪೊ, ಒನ್‌ಪ್ಲಸ್ ಬ್ರ್ಯಾಂಡ್ ಅನ್ನು ಕಂಪನಿ ಹೊಂದಿದೆ. ಒಪ್ಪೊ ಇಂಡಿಯಾದ ಕಚೇರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ ವೇಳೆ ಅಲ್ಲಿನ ಉದ್ಯೋಗಿಗಳು ತಪ್ಪು ಮಾಹಿತಿಗಳನ್ನು, ಹಣಕಾಸು ಅಂಕಿ ಅಂಶಗಳನ್ನು ನೀಡಿದ್ದರು ಎಂದು ಡಿಆರ್‌ಐ ತಿಳಿಸಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ, ಚೀನಿ ಮೊಬೈಲ್ ಕಂಪನಿ ವಿವೊ ವಿರುದ್ಧ ಇ.ಡಿ ದಾಳಿ