ನವ ದೆಹಲಿ: ನೀವು ಇನ್ನು ಮುಂದೆ ಹೋಟೆಲ್ ಬುಕ್ ಮಾಡಿದ ಬಳಿಕ ಅದನ್ನು ರದ್ದುಪಡಿಸಿದರೆ ಅಥವಾ ಏರ್ ಟಿಕೆಟ್ ಬುಕ್ ಅನ್ನು ಕಾಯ್ದಿರಿಸಿದ ಬಳಿಕ ರದ್ದುಪಡಿಸಿದರೆ, ಅದಕ್ಕೆ ೫% ಜಿಎಸ್‌ಟಿ ಅನ್ವಯವಾಗಲಿದೆ.
ಹಣಕಾಸು ಇಲಾಖೆ ಜಿಎಸ್‌ಟಿ ಕುರಿತ ಕೆಲ ಸ್ಪಷ್ಟನೆಗಳನ್ನು ನೀಡಿದೆ. ಈ ಸೇವೆಗಳಿಗೆ ಸಂಬಂಧಿಸಿ ಹಣ ಪಾವತಿಯನ್ನು ಸೇವೆ ಎಂದು ಪರಿಗಣಿಸಿದ ಬಳಿಕ, ಅದನ್ನು ರದ್ದುಪಡಿಸಿದರೆ ತಗಲುವ ಶುಲ್ಕಕ್ಕೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನಾ ಘಟಕ ( Tax Research Unit) ತಿಳಿಸಿದೆ.
ರೈಲ್ವೆ ಎಸಿ ಕೋಚ್ ಟಿಕೆಟ್ ರದ್ದುಪಡಿಸಿದರೆ ಜಿಎಸ್‌ಟಿ
ನೀವು ರೈಲ್ವೆಯ ಪ್ರಥಮ ದರ್ಜೆ ಅಥವಾ ಎಸಿ ಕೋಚ್ ಟಿಕೆಟ್ ಅನ್ನು ಬುಕ್ ಮಾಡಿದ ಬಳಿಕ ಒಂದು ವೇಳೆ ರದ್ದುಪಡಿಸಿದರೆ, ಅದಕ್ಕೆ ತಗಲುವ ಶುಲ್ಕದ ಮೇಲೆ ೫% ಜಿಎಸ್‌ಟಿಯನ್ನೂ ಕೊಡಬೇಕಾಗುತ್ತದೆ.
ಉದಾಹರಣೆಗೆ ನೀವು ರೈಲ್ವೆಯ ಎಸಿ ದರ್ಜೆಯ ಟಿಕೆಟ್ ಅನ್ನು ರದ್ದುಪಡಿಸಿದ್ದೀರಿ ಎಂದರೆ ರದ್ದತಿ ಶುಲ್ಕವಾಗಿ ೨೪೦ ರೂ. ಕೊಡಬೇಕಾಗುತ್ತದೆ. ಈ ರದ್ದತಿ ಶುಲ್ಕದ ಮೇಲೆ ೫% ಜಿಎಸ್‌ಟಿ ಎಂದರೆ ಹೆಚ್ಚುವರಿ ೧೨ ರೂ. ಕೊಡಬೇಕಾಗುತ್ತದೆ. ಅಂದರೆ ಒಟ್ಟು ರದ್ದತಿ ಶುಲ್ಕವಾಗಿ ೨೬೨ ರೂ. ಕೊಡಬೇಕಾಗುತ್ತದೆ. ಹೀಗಿದ್ದರೂ ಇತರ ದರ್ಜೆಯ ರೈಲ್ವೆ ಟಿಕೆಟ್ ರದ್ದತಿಗೆ ಜಿಎಸ್‌ಟಿ ಇರುವುದಿಲ್ಲ.
ಹೀಗಿದ್ದರೂ ಯಾವುದಾದರೂ ಪ್ರಾಪರ್ಟಿ ಖರೀದಿ ಪ್ರಕ್ರಿಯೆಯಲ್ಲಿ ರದ್ದುಪಡಿಸಿದರೆ ಅದಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲ.