ಮುಖ್ಯಾಂಶಗಳು
- ನೋಂದಾಯಿತ ಬ್ರಾಂಡ್ ರಹಿತ ಆಹಾರ ಧಾನ್ಯಗಳ ಮೇಲೆ ೫% ಜಿಎಸ್ಟಿಗೆ ಭಾರಿ ವಿರೋಧ
- ಗಿರಣಿಗಳ ಮಾಲೀಕರು, ವರ್ತಕರ ಸಂಘಟನೆಗಳಿಂದ ಜುಲೈ ೧೫ರಂದು ಪ್ರತಿಭಟನೆ
- ಜುಲೈ ೧೮ರಿಂದ ಜಾರಿಯಾಗಲಿದೆ ಜಿಎಸ್ಟಿಯ ಹೊಸ ಬದಲಾವಣೆ
- ಅಕ್ಕಿ, ಗೋಧಿ, ಜೋಳ ಇತ್ಯಾದಿಗಳ ಮೇಲೆ ಜಿಎಸ್‌ಟಿ ರದ್ದುಪಡಿಸಲು ಒತ್ತಡ
- ಗ್ರಾಹಕರಿಗೆ ಅಕ್ಕಿ, ಬೇಳೆಕಾಳುಗಳ ದರ ಹೆಚ್ಚಳದ ಬಿಸಿ ಸಂಭವ
ಬೆಂಗಳೂರು: ಜಿಎಸ್‌ಟಿ ಮಂಡಳಿಯ ಇತ್ತೀಚಿನ ಸಭೆಯಲ್ಲಿ ನೋಂದಾಯಿತ ಬ್ರಾಂಡ್ ರಹಿತ ಆಹಾರ ಧಾನ್ಯಗಳಿಗೆ ಶೇ. 5 ಜಿ.ಎಸ್.ಟಿ ತೆರಿಗೆಯನ್ನು ವಿಧಿಸಿರುವುದಕ್ಕೆ ನಾನಾ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಕೂಡಲೇ ಜಿಎಸ್‌ಟಿ ವಿಧಿಸುವ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಜುಲೈ ೧೫ರಂದು ಪ್ರತಿಭಟನೆಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಜುಲೈ 15ರಂದು ರಾಜ್ಯಾದ್ಯಂತ ಅಕ್ಕಿ ಗಿರಣಿಗಳ ಚಟುವಟಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಸಂಘ ನಿರ್ಧರಿಸಿದೆ. ದೇಶಾದ್ಯಂತ ಜುಲೈ 18ರಂದು ಹೊಸ ನಿಯಮ ಜಾರಿಗೆ ಬರಲಿದೆ. ಈ ಜನ ವಿರೋಧಿ ತೆರಿಗೆ ನೀತಿಯನ್ನು ಜಿಎಸ್‌ಟಿ ಮಂಡಳಿಯು ಮರು ಪರಿಶೀಲಿಸಬೇಕೆಂದು ಸಂಘ ಮನವಿ ಮಾಡಿದೆ. ಈ ಪ್ರತಿಭಟನೆಗೆ ದಿ ಬೆಂಗಳೂರು ಹೋಲ್‌ಸೇಲ್ ಫುಡ್ ಗ್ರೈನ್ಸ್ & ಪಲ್ಸಸ್ ಮರ್ಚೆಂಟ್ಸ್ ಅಸೋಸಿಯೇಷನ್, ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್ ಮತ್ತು ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್‌ಗಳು ಸಾಥ್ ಕೊಟ್ಟಿವೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಾದರೆ ಜನರಿಗೆ ನೇರವಾಗಿ ಇದರ ಸಂಕಷ್ಟ ತಟ್ಟುತ್ತದೆ. ಕೇಂದ್ರ ಸರಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಂಘ ಮನವಿ ಮಾಡಿದೆ.
ಏನಿದು ವಿವಾದ?
ಜಿಎಸ್‌ಟಿ ಮಂಡಳಿಯು ಚಂಡೀಗಢದಲ್ಲಿ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಬ್ರಾಂಡ್ ಹಾಗೂ ನೋಂದಾಯಿತವಲ್ಲದ ಬ್ರ್ಯಾಂಡ್ ಮತ್ತು ಪ್ಯಾಕೇಜ್ಡ್ ಆಹಾರ ಧಾನ್ಯಗಳ ಮಾರಾಟಕ್ಕೆ ೫% ಜಿಎಸ್‌ಟಿಯನ್ನು ವಿಧಿಸಿದೆ. ಇದಕ್ಕೆ ಮುನ್ನ ನೋಂದಾಯಿತ ಬ್ರ್ಯಾಂಡ್ ಹಾಗೂ ಲೇಬಲ್ ಸಹಿತ ಆಹಾರ ಧಾನ್ಯಗಳಿಗೆ ಮಾತ್ರ ೫% ಜಿಎಸ್‌ಟಿ ಇತ್ತು. ಆದರೆ ಇದೀಗ ಜುಲೈ ೧೮ರಿಂದ ಎಲ್ಲ ಕೆಟಗರಿಗೂ ೫% ಜಿಎಸ್‌ಟಿ ಅನ್ವಯವಾಗಲಿದೆ. ಇದರ ಪರಿಣಾಮ ಅಕ್ಕಿ ಗಿರಣಿಗಳು ತಮ್ಮ ಗ್ರಾಹಕರಿಗೆ, ಅಕ್ಕಿ ಮಾರಾಟಗಾರರಿಗೆ ಹೆಚ್ಚುವರಿ ತೆರಿಗೆ ಹೊರೆಯನ್ನು ವರ್ಗಾಯಿಸಲಿವೆ. ಆಗ ದಿನ ಬಳಕೆಯ ಅಕ್ಕಿ, ಜೋಳ, ರಾಗಿ ಇತ್ಯಾದಿ ಆಹಾರ ಧಾನ್ಯಗಳ ದರಗಳು ಏರಿಕೆಯಾಗಲಿವೆ.
ಏನಿದು ಅನ್ ಬ್ರಾಂಡೆಡ್ ಪ್ಯಾಕೇಜ್ಡ್ ಅಕ್ಕಿ? ನೀವು ಜನರಲ್ ಸ್ಟೋರ್‌ಗಳಲ್ಲಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಇತ್ಯಾದಿಗಳನ್ನು ಹಲವಾರು ಬ್ರಾಂಡ್‌ಗಳ ಹೆಸರಿನಲ್ಲಿ ಹಾಗೂ ನಾನಾ ಗಾತ್ರದ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವುದನ್ನು ನೋಡಿರಬಹುದು. ಆದರೆ ಅವುಗಳೆಲ್ಲವೂ ಟ್ರೇಡ್ ಮಾರ್ಕ್ ಇರುವ ನೋಂದಾಯಿತ ಬ್ರಾಂಡ್ ಆಗಿರುವುದಿಲ್ಲ. ಬಹುಪಾಲು ಬ್ರಾಂಡ್‌ಗಳು ನೋಂದಣಿ ಆಗಿರುವುದಿಲ್ಲ. ಹಾಗಂತ ಅವುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ. ಆದರೆ ಜಿಎಸ್‌ಟಿ ಮಂಡಳಿಯ ಇತ್ತೀಚಿನ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಪ್ರಕಾರ, ಜುಲೈ ೧೮ರಿಂದ ನೋಂದಾಯಿತ ಬ್ರಾಂಡ್ ಅಥವಾ ನೋಂದಣಿಯಾಗದಿರುವ ಬ್ರಾಂಡ್ ಬ್ರಾಂಡ್ ಎಂಬ ವ್ಯತ್ಯಾಸವಿಲ್ಲದೆ, ಸಮಾನವಾಗಿ ೫% ಜಿಎಸ್‌ಟಿ ಅನ್ವಯವಾಗಲಿದೆ. ಇದಕ್ಕೆ ಅಕ್ಕಿ ಗಿರಣಿದಾರರು, ಸಗಟು ವರ್ತಕರು ವಿರೋಧಿಸುತ್ತಿದ್ದಾರೆ.
ಅನ್ ಬ್ರಾಂಡೆಡ್ ಪಾಲು ಹೆಚ್ಚು: ಆಹಾರ ಧಾನ್ಯಗಳ ಮಾರುಕಟ್ಟೆಯಲ್ಲಿ ೯೦%ಕ್ಕೂ ಹೆಚ್ಚು ವಹಿವಾಟು ಅನ್ ಬ್ರಾಂಡೆಡ್ ಧಾನ್ಯಗಳನ್ನೇ ಒಳಗೊಂಡಿದೆ. ಪ್ಯಾಕೇಟ್‌ಗಳಲ್ಲಿ ಮಾರಾಟವಾದರೂ, ಅವುಗಳಿಗೆ ನೋಂದಾಯಿತ ಟ್ರೇಡ್ ಮಾರ್ಕ್ ಇರುವುದಿಲ್ಲ. ಇದೀಗ ಅವುಗಳಿಗೆ ಮೊದಲ ಬಾರಿಗೆ ಜಿಎಸ್‌ಟಿ ಅಡಿಯಲ್ಲಿ ೫% ತೆರಿಗೆ ವಿಧಿಸಿರುವುದರಿಂದ ಜನತೆಗೆ ಭಾರಿ ಹೊರೆಯಾಗಲಿದೆ. ಇದು ಸಮಂಜಸವಲ್ಲ ಎನ್ನುತ್ತಾರೆ ಬೇಳೆ ಕಾಳು ಸಗಟು ವರ್ತಕರ ಸಂಘದ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ.
ಹೊಸ ಬದಲಾವಣೆ ಏನು? ಮತ್ತದರ ಪರಿಣಾಮ ಏನು?
ನೀವು ಮಾರುಕಟ್ಟೆಯಲ್ಲಿ, ಇಂಡಿಯಾಗೇಟ್ ಬಾಸ್ಮತಿ, ಅಶೀರ್ವಾದ ಗೋಧಿ ಹಿಟ್ಟನ್ನು ನೋಡಿರಬಹುದು. ಆಶೀರ್ವಾದ ನೋಂದಾಯಿತ ಬ್ರಾಂಡ್. ಆಶೀರ್ವಾದ ಗೋಧಿ ಹಿಟ್ಟಿಗೆ ೫% ಜಿಎಸ್‌ಟಿ ಇದೆ. ಇದೇ ವೇಳೆ ಸ್ಥಳೀಯ ವರ್ತಕರು ಕೂಡ ಪ್ಯಾಕೇಟ್‌ಗಳಲ್ಲಿ ಗೋಧಿ, ಅಕ್ಕಿ ಇತ್ಯಾದಿಯನ್ನು ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವುದನ್ನು ಕಾಣಬಹುದು. ಇದುವರೆಗೆ ಅವುಗಳಿಗೆ ೫% ಜಿಎಸ್‌ಟಿ ಇದ್ದಿರಲಿಲ್ಲ. ಆದರೆ ಜಿಎಸ್‌ಟಿ ಮಂಡಳಿಯ ಇತ್ತೀಚಿನ ನಿರ್ಧಾರದ ಪ್ರಕಾರ ಜನರಲ್ ಸ್ಟೋರ್‌ನವರು ತಮ್ಮ ಅಂಗಡಿಯ ಹೆಸರನ್ನು ಪ್ಯಾಕೇಟ್‌ನಲ್ಲಿ ಮುದ್ರಿಸಿ ಮಾರಾಟ ಮಾಡಿದರೆ, ಅದಕ್ಕೆ ೫% ಜಿಎಸ್‌ಟಿ ಕೊಡಬೇಕಾಗುತ್ತದೆ. ಸಹಜವಾಗಿ ವರ್ತಕರು ಗ್ರಾಹಕರಿಗೆ ಇದರ ಹೊರೆಯನ್ನು ವರ್ಗಾಯಿಸುತ್ತಾರೆ. ಆಗ ಜನ ಸಾಮಾನ್ಯರಿಗೆ ದರ ಏರಿಕೆಯ ಬಿಸಿ ತಟ್ಟುತ್ತದೆ.
ಲೂಸ್ ಆಗಿ ಕೊಟ್ಟರೂ ದರ ಏರಿಕೆ ಖಚಿತ
ಹಾಗಾದರೆ ಪ್ಯಾಕೇಟ್ ಬಿಟ್ಟು, ಲೂಸ್ ಆಗಿ ಆಹಾರ ಧಾನ್ಯಗಳನ್ನು ಮಾರಾಟ ಮಾಡಿದರೆ ಜಿಎಸ್‌ಟಿ ಅನ್ವಯವಾಗುತ್ತದೆಯೇ? ಆಗುವುದಿಲ್ಲ. ಏಕೆಂದರೆ ವರ್ತಕರು ಸಗಟು ವರ್ತಕರಿಂದ ಹೋಲ್ ಸೇಲ್ ದರದಲ್ಲಿ ಖರೀದಿಸುತ್ತಾರೆ. ಹೋಲ್‌ಸೇಲ್ ವರ್ತಕರು ಕೂಡ ಜಿಎಸ್‌ಟಿ ಕೊಡಬೇಕಾದ್ದರಿಂದ ವರ್ತಕರು ಲೂಸ್ ಆಗಿ ಕೊಟ್ಟರೂ, ಅವರೂ ತೆರಿಗೆ ಬಾಬ್ತು ಹೆಚ್ಚುವರಿ ದರ ಕೊಟ್ಟು ತಂದಿರುತ್ತಾರೆ. ಹೀಗಾಗಿ ಗ್ರಾಹಕರಿಗೇ ಹೊರೆ ವರ್ಗಾವಣೆಯಾಗುತ್ತದೆ.
ಅಕ್ಕಿ ಗಿರಣಿದಾರರಿಗೆ ನಷ್ಟವೇನು? ಅಕ್ಕಿ ಗಿರಣಿದಾರರು ರೈತರಿಂದ ಭತ್ತವನ್ನು ಖರೀದಿಸುತ್ತಾರೆ. ೫% ಜಿಎಸ್‌ಟಿ ವಿಧಿಸುವುದರಿಂದ ಅಕ್ಕಿ ಗಿರಣಿದಾರರಿಗೆ ಭಾರಿ ಸಂಕಷ್ಟವಾಗಲಿದೆ. ಏಕೆಂದರೆ ಒಂದೋ ರೈತರಿಂದ ಖರೀದಿಸುವಾಗಲೇ ೫% ಕಡಿಮೆ ಬೆಲೆಗೆ ಖರೀದಿಸಬೇಕಾಗುತ್ತದೆ. ಅಕ್ಕಿ ಗಿರಣಿದಾರರಿಗೆ ಸಿಗುವ ಲಾಭಾಂಶವೂ ತಗ್ಗಲಿದೆ. ಆಗ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ.
ಅಕ್ಕಿ ಗಿರಣಿಗಳ ಯಂತ್ರೋಪಕರಣಗಳ ಜಿಎಸ್‌ಟಿ ಹೆಚ್ಚಳ: ಅಕ್ಕಿ ಗಿರಣಿಗಳ ಯಂತ್ರೋಪಕರಣಗಳ ಮೇಲೆ ಜಿಎಸ್‌ಟಿಯನ್ನು ೫%ಯಿಂದ ೧೮%ಕ್ಕೆ ಏರಿಸಲಾಗಿದೆ. ಇದು ಸಮಂಜಸವಲ್ಲ ಎನ್ನುತ್ತಾರೆ ರಾಜ್ಯ ಗಿರಣಿದಾರರ ಸಂಘದ ಜಂಟಿ ಕಾರ್ಯದರ್ಶಿ ಕೆ.ಜೆ ನಾಗರಾಜ್ ತಿಳಿಸಿದ್ದಾರೆ.
ಅಕ್ಕಿ ದರದಲ್ಲಿ ಕ್ವಿಂಟಾಲ್‌ಗೆ ೩೦೦-೪೦೦ ರೂ. ಹೆಚ್ಚಳ: ಜಿಎಸ್‌ಟಿ ಅಡಿಯಲ್ಲಿ ಎಲ್ಲ ಬಗೆಯ ಆಹಾರ ಧಾನ್ಯಗಳಿಗೆ ೫% ಜಿಎಸ್‌ಟಿ ವಿಧಿಸುವುದರಿಂದ ಪ್ರತಿ ಕ್ವಿಂಟಾಲ್‌ಗೆ ೩೦೦ ರೂ.ಗಳಿಂದ ೪೦೦ ರೂ. ದರ ಏರಿಕೆಯಾಗಲಿದೆ ಎನ್ನುತ್ತಾರೆ ಕೆ.ಜೆ. ನಾಗರಾಜ್.
ಭತ್ತ ಬೆಳೆ ಕುಂಠಿತವಾಗುವ ಅಪಾಯ
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೊದಲಾದ ಕಡೆಗಳಲ್ಲಿ ಭತ್ತದ ಬದಲು ವಾಣಿಜ್ಯ ಬೆಳೆಯಾದ ಅಡಕೆಯತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಭತ್ತಕ್ಕೆ ಕೆಜಿಗೆ ೨೫ ರೂ. ಸಿಕ್ಕಿದರೆ, ಅಡಕೆಗೆ ೪೦೦-೫೦೦ ರೂ. ಸಿಗುತ್ತದೆ. ಹೀಗಾಗಿ ವಾಣಿಜ್ಯ ಬೆಳೆಯ ಕಡೆಗೆ ಆಕರ್ಷಿತರಾಗುತ್ತಾರೆ. ಹೀಗಿರುವಾಗ ಅಕ್ಕಿಯ ಮೇಲೆ ತೆರಿಗೆ ವಿಧಿಸುವುದು ಸಮಂಜಸವಲ್ಲ ಎನ್ನುತ್ತಾರೆ ವರ್ತಕರು. ರಾಯಚೂರಿನಲ್ಲಿ ಹತ್ತಿ ಮತ್ತು ಮೆಣಸಿನ ಬೆಳೆಗೆ ಆಕರ್ಷಿತರಾಗುತ್ತಿದ್ದಾರೆ.
ಪರಿಹಾರವೇನು?: ಬ್ರ್ಯಾಂಡ್ ಮತ್ತು ಬ್ರ್ಯಾಂಡ್ ರಹಿತ ಅಕ್ಕಿ, ಜೋಳ, ಗಾಧಿ ಇತ್ಯಾದಿ ದಿನ ಬಳಕೆಯ ಆಹಾರ ವಸ್ತುಗಳಿಗೆ ೫% ಬದಲಿಗೆ ೧-೨%ಕ್ಕೆ ಇಳಿಕೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಸರ್ಕಾರದ ವಾದವೇನು?: ಬ್ರಾಂಡ್ ಮತ್ತು ಬ್ರಾಂಡ್ ರಹಿತ ಎಂಬ ಭೇದ ಮಾಡುವುದರಿಂದ ತೆರಿಗೆ ಸೋರಿಕೆಯಾಗುತ್ತದೆ. ಹೀಗಾಗಿ ತೆರಿಗೆ ಸೋರಿಕೆಯನ್ನು ತಡೆಗಟ್ಟಲು, ಉದ್ಯಮದಲ್ಲಿ ಪಾರದರ್ಶಕತೆಗೆ ೫% ಜಿಎಸ್‌ಟಿ ಅಗತ್ಯ ಎಂದು ಸರ್ಕಾರ ತಿಳಿಸಿದೆ.
ಆಹಾರ ಧಾನ್ಯಕ್ಕೆ ೫% ತೆರಿಗೆ ಬೇಕೆ? ಜನಸಾಮಾನ್ಯರು, ಮಧ್ಯಮ ವರ್ಗದವರು ಹಣದುಬ್ಬರದ ಸಮಸ್ಯೆಗೆ ಬಳಲಿರುವುದರಿಂದ, ಅಗತ್ಯ ವಸ್ತುಗಳಲ್ಲಿ ಒಂದಾಗಿರುವ ಆಹಾರ ಧಾನ್ಯಗಳ ಮೇಲೆ ೫% ತೆರಿಗೆ ಹೊರೆಯನ್ನು ಇಳಿಸಬೇಕು. ಸಂಬಂಧಪಟ್ಟ ಎಲ್ಲ ಗಿರಣಿದಾರರು, ವರ್ತಕರ ವಲಯದ ಜತೆ ಸಮಾಲೋಚಿಸಿ, ಜಿಎಸ್‌ಟಿ ಮಂಡಳಿಯಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಚರ್ಚಿಸಿ ನಿರ್ಧರಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.