Site icon Vistara News

GOOD NEWS: ಜುಲೈ ಅಂತ್ಯದೊಳಗೆ 5G ಸ್ಪೆಕ್ಟ್ರಮ್‌ ಹರಾಜಿಗೆ ಸಿದ್ಧತೆ, ಕೇಂದ್ರ ಸಚಿವ ಸಂಪುಟ ಗ್ರೀನ್‌ ಸಿಗ್ನಲ್

5g mobile

ನವ ದೆಹಲಿ: ಭಾರತದಲ್ಲಿ ಶೀಘ್ರದಲ್ಲಿಯೇ ಬಹು ನಿರೀಕ್ಷಿತ 5G ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಬಗ್ಗೆ ತನ್ನ ಅನುಮೋದನೆ ನೀಡಿದೆ. ಬುಧವಾರ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ 5G ಜಮಾನಾ ಸನ್ನಿಹಿತವಾಗಿದೆ.

ದೂರ ಸಂಪರ್ಕ ಇಲಾಖೆ ಕೂಡಲೇ ಹರಾಜಿಗೆ ಸಂಬಂಧಿಸಿ ಅರ್ಜಿಗಳನ್ನು ಆಹ್ವಾನಿಸಲಿದೆ ( Notice Inviting Applications- NIA) ದೂರಸಂಪರ್ಕ ಇಲಾಖೆಯು ಈ ಅರ್ಜಿಗಳನ್ನು ಆಹ್ವಾನಿಸಿದ ಬಳಿಕ ಹರಾಜು ನಡೆಸಲು ಕೆಲ ವಾರಗಳ ಅವಧಿ ಬೇಕಾಗುತ್ತದೆ. ಟ್ರಾಯ್‌ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಹರಾಜಿನ ಮೂಲ ದರಗಳನ್ನು ನಿಗದಿಪಡಿಸಲಿದೆ. ದೇಶದ ಅತಿ ದೊಡ್ಡ ಸ್ಪೆಕ್ಟ್ರಮ್‌ ಹರಾಜು ಇದಾಗಲಿದೆ.

ಸರಕಾರ ಒಟ್ಟು 72097.85 ಮೆಗಾ ಹರ್ಟ್ಸ್‌ ಸ್ಪೆಕ್ಟ್ರಮ್‌ ಅನ್ನು ಹರಾಜಿಗಿಡಲಿದೆ. 20 ವರ್ಷಗಳ ಅವಧಿಗೆ ಈ ತರಂಗ ಗುಚ್ಛಗಳು ಸಿಗಲಿವೆ. 2022ರ ಜುಲೈ ಅಂತ್ಯದೊಳಗೆ ಹರಾಜು ನಡೆಸಲು ಸರಕಾರ ಉದ್ದೇಶಿಸಿದೆ.

600 MHz, 700MHz, 800MHz, 900MHz, 1800MHz, 2100MHz, 2300MHz ಮತ್ತು 26GHz ಶ್ರೇಣಿಗಳ ತರಂಗಾಂತರಗಳಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ.

ಮೂಲ ದರ ಇಳಿಸಲು ಖಾಸಗಿ ಟೆಲಿಕಾಂ ಕಂಪನಿಗಳ ಪಟ್ಟು

ಸ್ಪೆಕ್ಟ್ರಮ್‌ ದುಬಾರಿಯಾಗಲಿದ್ದು, ಟೆಲಿಕಾಂ ಕಂಪನಿಗಳು ಈ ಹೊರೆಯನ್ನು ಹೊತ್ತುಕೊಳ್ಳುವುದು ಅನಿವಾರ್ಯವಾಗಲಿದೆ. ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳು ಭಾರಿ ದರ ವಿಧಿಸಬಾರದು ಎಂದಿವೆ. ಮೂಲ ದರ ಅತ್ಯಧಿಕ ಮಟ್ಟದಲ್ಲಿ ಇದ್ದರೆ ಭಾಗವಹಿಸುವುದಿಲ್ಲ ಎಂದು ಏರ್‌ಟೆಲ್‌ ತಿಳಿಸಿದೆ.

ಕಳೆದ ತಿಂಗಳು ಡಿಜಿಟಲ್‌ ಕಮ್ಯುನಿಕೇಶನ್ಸ್‌ ಕಮೀಶನ್‌ 5G ಹರಾಜಿಗೆ ಅನುಮೋದಿಸಿತ್ತು. ಮೂಲ ದರದಲ್ಲಿ 90% ಕಡಿತಕ್ಕೆ ಮೊಬೈಲ್‌ ಸೇವೆಗಳನ್ನು ನೀಡುವ ಕಂಪನಿಗಳು ಲಾಬಿ ನಡೆಸಿವೆ.

ಹೀಗಿದ್ದರೂ ಸರಕಾರ 5G ಮೂಲ ದರ ಬಗ್ಗೆ ನಿರ್ಧಾರವನ್ನು ಪ್ರಕಟಿಸಿಲ್ಲ.

ಮೊದಲ ಬಾರಿಗೆ ಬಿಡ್‌ನಲ್ಲಿ ಗೆದ್ದವರು ಸ್ಪೆಕ್ಟ್ರಮ್‌ ಖರೀದಿಗೆ ಮುಂಗಡ ಪಾವತಿಸಬೇಕಿಲ್ಲ. 20 ಕಂತುಗಳಲ್ಲಿ ಶುಲ್ಕ ಪಾವತಿಸಬಹುದು. 10 ವರ್ಷಗಳ ಬಳಿಕ ಬಿಡ್ಡರ್‌ಗಳು ಸ್ಪೆಕ್ಟ್ರಮ್‌ ಅನ್ನು ಹಿಂತಿರುಗಿಸಲೂ ಅವಕಾಶ ನೀಡಲಾಗಿದೆ. ಟ್ರಾಯ್‌ ಈ ಹಿಂದೆ 5 ಲಕ್ಷ ಕೋಟಿ ರೂ.ಗಳ ಮೂಲ ದರವನ್ನು ಶಿಫಾರಸು ಮಾಡಿತ್ತು.

ಖಾಸಗಿ ನೆಟ್‌ವರ್ಕ್‌ ಅಭಿವೃದ್ಧಿಗೆ ಅವಕಾಶ

ಸರಕಾರ ಪ್ರೈವೇಟ್‌ ಕ್ಯಾಪ್ಟಿವ್‌ ನೆಟ್‌ವರ್ಕ್‌ಗಳನ್ನು (Private captive networks) ಸ್ಥಾಪಿಸಲು ಕೂಡ ಹಾದಿ ಸುಗಮಗೊಳಿಸಿದೆ. ಇದರಿಂದ ಉದ್ಯಮ ಕ್ಷೇತ್ರದಲ್ಲಿ ಹೊಸ ಬಗೆಯ ಮೆಶೀನ್-ಟು ಮೆಶೀನ್‌ ಕಮ್ಯುನಿಕೇಶನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕೃತಕ ಬುದ್ಧಿಮತ್ತೆ (ಎಐ), ಆಟೊಮೇಟಿವ್‌ ತಂತ್ರಜ್ಞಾನಗಳ ವ್ಯಾಪಕ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಆರೋಗ್ಯ, ಕೃಷಿ, ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಪ್ರಗತಿಗೆ ಹಾದಿ ತೆರೆದುಕೊಳ್ಳಲಿದೆ ಎನ್ನುತ್ತಾರೆ ತಜ್ಞರು.

Exit mobile version