ನವ ದೆಹಲಿ: ದೇಶದಲ್ಲಿ 5ಜಿ ಸೇವೆಗೆ ಶನಿವಾರ ( India 5G launch) ಚಾಲನೆ ದೊರಕಲಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ (IMC-2022) ಆರನೇ ಆವೃತ್ತಿಯ ಉದ್ಘಾಟನೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ.
ಬಳಿಕ ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ವಾಣಿಜ್ಯೋದ್ದೇಶಕ್ಕೆ ಬಿಡುಗಡೆಗೊಳಿಸಲಿವೆ. ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್, ಅಕ್ಟೋಬರ್‌ನಲ್ಲಿ 5ಜಿ ಸೇವೆಗೆ ಚಾಲನೆ ನೀಡುವುದಾಗಿ ಘೋಷಿಸಿವೆ. ದೀಪಾವಳಿ ವೇಳೆಗೆ ಪ್ರಮುಖ ಮೆಟ್ರೊ ನಗರಗಳಲ್ಲಿ ಜನತೆಗೆ 5ಜಿ ಸೇವೆ ಲಭಿಸಲಿದೆ.
೫ಜಿ ಸೇವೆಯ ಚಾಲನೆಗೆ ಮುನ್ನ ಭಾರಿ ಪೂರ್ವಸಿದ್ಧತೆ ನಡೆದಿರುವುದನ್ನು ಇಲ್ಲಿ ಗಮನಿಸಬಹುದು. ಇತ್ತೀಚೆಗೆ 5ಜಿ ಸ್ಪೆಕ್ಟ್ರಮ್ ಹರಾಜು ಯಶಸ್ವಿಯಾಗಿ ನಡೆದಿತ್ತು. 51,236 ಮೆಗಾ ಹರ್ಟ್ಸ್ ತರಂಗಾಂತರಗಳನ್ನು ಟೆಲಿಕಾಂ ಕಂಪನಿಗಳಿಗೆ ಮಂಜೂರು ಮಾಡಲಾಗಿತ್ತು. 1,50,173 ಕೋಟಿ ರೂ. ಆದಾಯವನ್ನು ಸರ್ಕಾರ ಗಳಿಸಿತ್ತು. IoT, M2M, AI, ಎಡ್ಜ್ ಕಂಪ್ಯೂಟಿಂಗ್, ರೊಬಾಟಿಕ್ಸ್ ಇತ್ಯಾದಿಗಳಿಗೆ ೫ಜಿ ಅನುಕೂಲಕರ.
5ಜಿ ಸೇವೆಯ ಲಭ್ಯತೆಯಿಂದ ಹಲವಾರು ಆರ್ಥಿಕ ಚಟುವಟಿಕೆಗಳು ಸೃಷ್ಟಿಯಾಗಲಿದೆ. ಸಮಾಜಕ್ಕೆ ಅನುಕೂಲ ದೊರೆಯಲಿದೆ. ಬೆಳವಣಿಗೆಗೆ ಸಾಂಪ್ರದಾಯಿಕವಾಗಿ ಇರುವ ಅಡಚಣೆಗಳು ದೂರವಾಗಲಿದೆ. ಡಿಜಿಟಲ್ ಇಂಡಿಯಾ ಮತ್ತಷ್ಟು ವಿಕಾಸವಾಗಲಿದೆ. 2035ರ ವೇಳೆಗೆ ೫ಜಿ ಸೇವೆ ಆಧಾರಿತ ಆರ್ಥಿಕ ಚಟುವಟಿಕೆಗಳ ಮೌಲ್ಯ 450 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ.(೩೬ ಲಕ್ಷ ಕೋಟಿ ರೂ.)