ಮುಂಬಯಿ: ಭಾರತದಲ್ಲಿ ಮುಂಬರುವ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ವಿಪತ್ತು ನಿರ್ವಹಣೆ, ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಯಲ್ಲಿ 5ಜಿ ಕ್ರಾಂತಿ ಸಂಭವಿಸಲಿದೆ ಎಂದು ರಿಲಯನ್ಸ್ ಜಿಯೊ ಅಧ್ಯಕ್ಷ ಆಕಾಶ್ ಅಂಬಾನಿ ( Akash Ambani) ಮಂಗಳವಾರ ಹೇಳಿದ್ದಾರೆ. 5ಜಿ ಆ್ಯಂಬುಲೆನ್ಸ್ ಕೇವಲ ಹಿಂದುಳಿದ ಪ್ರದೇಶಗಳಿಗೆ ತಲುಪುವುದು ಮಾತ್ರವಲ್ಲದೆ, ಸಮೀಪದ ಆಸ್ಪತ್ರೆಗೆ ಡೇಟಾ ಮತ್ತು ವಿಡಿಯೊವನ್ನು ತ್ವರಿತವಾಗಿ ಮುಟ್ಟಿಸಲೂ ಸಹಕಾರಿ. ಇದರಿಂದ ರೋಗಿಗಳ ಜೀವ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.
ಹೊಸ ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು 5ಜಿ ಬೆಂಬಲಿಸಲಿದೆ. ಕೃಷಿ ಉತ್ಪಾದಕತೆಯನ್ನು ಸುಧಾರಿಸಲಿದೆ. ಹೈ ರೆಸೆಲ್ಯೂಷನ್ ಕ್ಯಾಮೆರಾ ನೆರವಿನಲ್ಲಿ ವಿಪತ್ತು ನಿರ್ವಹಣೆಯನ್ನೂ ಅಚ್ಚುಕಟ್ಟಾಗಿ ಮಾಡಬಹುದು. 2022ರ ಅಕ್ಟೋಬರ್ 1ರಂದು ಪ್ರಧಾನಮಂತ್ರಿಯವರು 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಅರ್ಧ ವರ್ಷ ತುಂಬುವುದರೊಳಗೆ 5ಜಿ ಕ್ರಾಂತಿಯನ್ನು ಎಲ್ಲೆಡೆ ಕಾಣಲಾಗುತ್ತಿದೆ ಎಂದು ಆಕಾಶ್ ಅಂಬಾನಿ ತಿಳಿಸಿದರು.
ರಿಲಯನ್ಸ್ ಜಿಯೊ 277 ನಗರ ಮತ್ತು ಪಟ್ಟಣಗಳಲ್ಲಿ ಟ್ರೂ 5ಜಿ ಸೇವೆಯನ್ನು ಆರಂಭಿಸಿದೆ. ಪ್ರತಿ ತಿಂಗಳೂ 5ಜಿ ನೆಟ್ ವರ್ಕ್ ದೇಶಾದ್ಯಂತ ವಿಸ್ತರಿಸುತ್ತಿದೆ. ಪ್ರತಿ ತಾಲ್ಲೂಕು ಮಟ್ಟದಲ್ಲೂ ವಿಸ್ತರಣೆಯನ್ನು ಕಾಣಬಹುದಾಗಿದೆ. ಇದು ವಿಶ್ವದಲ್ಲಿಯೇ ಅತಿ ವೇಗದ 5ಜಿ ವಿಸ್ತರಣೆಯಾಗಿದೆ ಎಂದು ಅವರು ತಿಳಿಸಿದರು.
ಸ್ಮಾರ್ಟ್ ಸಿಟಿಗಳ ನಿರ್ಮಾಣದಲ್ಲಿ 5ಜಿ ಮೂಲಕ ಸುರಕ್ಷತೆಯನ್ನು ಹೆಚ್ಚಿಸಬಹುದು. ತುರ್ತುಸೇವೆಗಳನ್ನು ಸುಧಾರಿಸಬಹುದು. ಉದ್ಯಮಗಳನ್ನು ಹೆಚ್ಚು ಜವಾಬ್ದಾರಿಯುತಗೊಳಿಸಬಹುದು. ಆಧುನಿಕ ಸಮಾಜ ನಿರ್ಮಾಣದಲ್ಲಿ ಇದು ಮಹತ್ವ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು. ಕೃಷಿಕರಿಗೆ ಸಕಾಲದಲ್ಲಿ ಹವಾಮಾನ ಮತ್ತು ಮಾರುಕಟ್ಟೆ ದರಗಳ ಸ್ಥಿತಿಗತಿಗಳನ್ನು ತಲುಪಿಸಲು 5ಜಿ ಸಹಕಾರಿಯಾಗಲಿದೆ. ಸ್ಮಾರ್ಟ್ ನೀರಾವರಿ ವ್ಯವಸ್ಥೆಯನ್ನೂ ಒದಗಿಸಬಹುದು ಎಂದರು.