ನವದೆಹಲಿ: ಭಾರತದ ಮೊಟ್ಟ ಮೊದಲ ೫ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನವಾದ ಮಂಗಳವಾರ ದಾಖಲೆಯ ೧.೪೫ ಲಕ್ಷ ಕೋಟಿ ರೂ.ಗಳ ಬಿಡ್ ಸಲ್ಲಿಕೆಯಾಗಿದೆ. 700 ಮೆಗಾಹರ್ಟ್ಸ್ ಬ್ಯಾಂಡ್, ಮಿಡ್-ಬ್ಯಾಂಡ್ (೩.೩-೩.೬೭ ಗಿಗಾಹರ್ಟ್ಸ್) ಮತ್ತು ಹೈ-ಬ್ಯಾಂಡ್ (೨೬ ಗಿಗಾ ಹರ್ಟ್ಸ್) ತರಂಗಾಂತರಗಳಿಗೆ ಬೇಡಿಕೆ ಸೃಷ್ಟಿಯಾಗಿತ್ತು. ಒಟ್ಟು ೪.೩ ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಮ್ ಅನ್ನು ಹರಾಜಿಗಿಡಲಾಗಿದೆ. ಈ ಹಿಂದೆ ೨೦೧೫ರಲ್ಲಿ ಸರ್ಕಾರ ೪ಜಿ ಸ್ಪೆಕ್ಟ್ರಮ್ ಹರಾಜಿನಿಂದ ೧.೦೯ ಲಕ್ಷ ಕೋಟಿ ರೂ. ಗಳಿಸಿತ್ತು.
ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 4ಜಿಗಿಂತ ೧೦ ಪಟ್ಟು ವೇಗದ ಮೊಬೈಲ್ ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸಲು ಸಜ್ಜಾಗುತ್ತಿರುವುದರಿಂದಾಗಿ, ಮಿಡ್ -ಬ್ಯಾಂಡ್ ಮತ್ತು ಹೈ-ಬ್ಯಾಂಡ್ ೫ಜಿ ಸ್ಪೆಕ್ಟ್ರಮ್‌ಗಳಿಗೆ ಬಿಡ್ ಸಲ್ಲಿಸಿವೆ. ಟೆಲಿಕಾಂ ಇಂಡಸ್ಟ್ರಿಗೆ ಹೊಸತಾಗಿ ಪ್ರವೇಶಿಸುತ್ತಿರುವ ಅದಾನಿ ಡೇಟಾ ನೆಟ್‌ವರ್ಕ್ಸ್ ಹೈ-ಬ್ಯಾಂಡ್ ತರಂಗಾಂತರಗಳಿಗೆ ಮಾತ್ರ ಬಿಡ್ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಮಿಲ್ಲಿಮೀಟರ್ ವೇವ್ (mmWave) ಎಂಬ ಈ ತರಂಗಾಂತರಗಳನ್ನು ಅದಾನಿ ಡೇಟಾ ನೆಟ್‌ವರ್ಕ್ಸ್ ತನ್ನ ಕ್ಯಾಪ್ಟಿವ್ ನೆಟ್‌ವರ್ಕ್‌ಗಳಿಗೆ ಮಾತ್ರ ಬಳಸಿಕೊಳ್ಳಲಿದೆ.
ಜಿಯೊದಿಂದ ೮೦,೦೦೦ ಕೋಟಿ ರೂ. ವೆಚ್ಚ: ರಿಲಯನ್ಸ್ ಜಿಯೊ ೫ಜಿ ಸ್ಪೆಕ್ಟ್ರಮ್ ಖರೀದಿ ಸಲುವಾಗಿ ೮೦,೦೦೦ ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯು ೭೦೦ ಮೆಗಾಹರ್ಟ್ಸ್ ಬ್ಯಾಂಡ್‌ನ ಅಖಿಲ ಭಾರತ ಮಟ್ಟದ ೫ಜಿ ಸ್ಪೆಕ್ಟ್ರಮ್, ೩.೬೭ ಗಿಗಾ ಹರ್ಟ್ಸ್‌ನ ಮಿಡ್-ಬ್ಯಾಂಡ್ ಮತ್ತು ಹೈ-ಬ್ಯಾಂಡ್ (೨೬ ಗಿಗಾಹರ್ಟ್ಸ್) ತರಂಗಾಂತರಗಳನ್ನು ಖರೀದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
” ೫ಜಿ ಹರಾಜಿನ ೪ ಸುತ್ತುಗಳು ಮುಗಿದಿವೆ. ಸರ್ಕಾರಕ್ಕೆ ೧,೪೫,೦೦೦ ಕೋಟಿ ರೂ. ಆದಾಯ ಲಭಿಸಲಿದೆ. ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ದೇಶದಲ್ಲಿ ೫ಜಿ ಸೇವೆ ಶುರುವಾಗುವ ನಿರೀಕ್ಷೆ ಇದೆʼʼ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
೪ ಕಂಪನಿಗಳಿಂದ ೫ಜಿ ಖರೀದಿಗೆ ಅಂದಾಜು ವೆಚ್ಚ
ರಿಲಯನ್ಸ್ ಜಿಯೊ | 80,000 ಕೋಟಿ ರೂ. |
ಏರ್‌ಟೆಲ್ | 45000-50,000 ಕೋಟಿ ರೂ. |
ವೊಡಾಫೋನ್ ಐಡಿಯಾ | 17,000-20,000 ಕೋಟಿ ರೂ. |
ಅದಾನಿ ಡೇಟಾ ನೆಟ್ ವರ್ಕ್ಸ್ | 800-1000 ಕೋಟಿ ರೂ. |