ನವ ದೆಹಲಿ: ಬಹು ನಿರೀಕ್ಷಿತ ೫ಜಿ ಸ್ಪೆಕ್ಟ್ರಮ್ ಹರಾಜು ಇಂದಿನಿಂದ ನಡೆಯಲಿದ್ದು, ಶೀಘ್ರದಲ್ಲಿಯೇ ಜನತೆಗೆ ೫ಜಿ ಸೇವೆ ಕೂಡ ಲಭಿಸುವ ನಿರೀಕ್ಷೆ ಉಂಟಾಗಿದೆ. ರಿಲಯನ್ಸ್ ಜಿಯೊ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಡೇಟಾ ನೆಟ್‌ವರ್ಕ್ಸ್ ಈ ಸ್ಪೆಕ್ಟ್ರಮ್ ಅನ್ನು ಖರೀದಿಸಲಿವೆ.
ಮುಂದಿನ ೬ರಿಂದ ೧೨ ತಿಂಗಳುಗಳಲ್ಲಿ ಹೈಸ್ಪೀಡ್ ೫ಜಿ ಸೇವೆ ವ್ಯಾಪಕವಾಗಿ ಲಭಿಸುವ ನಿರೀಕ್ಷೆ ಉಂಟಾಗಿದೆ. ನಾಲ್ಕು ಕಂಪನಿಗಳು ೭೨ GHz ಸ್ಪೆಕ್ಟ್ರಮ್ (72,000 ಮೆಗಾಹರ್ಟ್ಸ್) ಅನ್ನು ಖರೀದಿಸಲು ಸಜ್ಜಾಗಿವೆ. ಇವುಗಳ ಮೌಲ್ಯ ೪.೩ ಲಕ್ಷ ಕೋಟಿ ರೂ.ಗಳಾಗಿವೆ. ಹಾಗೂ ಇವುಗಳ ಅವಧಿ ೨೦ ವರ್ಷಗಳಾಗಿವೆ. ಈ ೫ಜಿ ಸ್ಪೆಕ್ಟ್ರಮ್ ಹರಾಜಿನ ಮೂಲಕ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ೭೦,೦೦೦ ಕೋಟಿ ರೂ.ಗಳಿಂದ ೧ ಲಕ್ಷ ಕೋಟಿ ರೂ. ಆದಾಯ ಲಭಿಸುವ ನಿರೀಕ್ಷೆ ಇದೆ. ೪ಜಿಗಿಂತ ೧೦ ಪಟ್ಟು ಹೆಚ್ಚು ವೇಗ ಇರುವ ೫ಜಿ ಸೇವೆಯಿಂದ ಭಾರತದ ಟೆಲಿಕಾಂ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.
ದೂರಸಂಪರ್ಕ ಇಲಾಖೆಯ ಪ್ರಕಾರ ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ೧೩ ಪ್ರಮುಖ ನಗರಗಳಲ್ಲಿ ೫ಜಿ ಸೇವೆ ಆರಂಭವಾಗಲಿದೆ. ಮುಂಬಯಿ, ಬೆಂಗಳೂರು, ದಿಲ್ಲಿ, ಗುರ್‌ಗಾಂವ್, ಕೋಲ್ಕತಾ, ಲಖನೌ, ಪುಣೆ, ಚೆನ್ನೈ, ಗಾಂಧಿನಗರ, ಹೈದರಾಬಾದ್, ಜಾಮ್‌ನಗರ್, ಅಹಮದಾಬಾದ್, ಚಂಡೀಗಢದಲ್ಲಿ ಮೊದಲ ಹಂತದಲ್ಲಿ ೫ಜಿ ಜಾರಿಯಾಗಲಿದೆ.
ರಿಲಯನ್ಸ್ ಜಿಯೊ ೧೪,೦೦ ಕೋಟಿ ರೂ.ಗಳ ಭದ್ರತಾ ಠೇವಣಿಯನ್ನು ಈಗಾಗಲೇ ಇಟ್ಟಿದೆ. ಭಾರ್ತಿ ಏರ್‌ಟೆಲ್ ೫,೫೦೦ ಕೋಟಿ ರೂ, ವೊಡಾಫೋನ್ ಐಡಿಯಾ ೨,೨೦೦ ಕೋಟಿ ರೂ. ಹಾಗೂ ಅದಾನಿ ಡೇಟಾ ನೆಟ್‌ವರ್ಕ್ಸ್ ೧೦೦ ಕೋಟಿ ರೂ. ಠೇವಣಿಯನ್ನು ಕೊಟ್ಟಿದೆ. ಅರ್ಹತೆಯ ಅಂಕಗಳ ಲೆಕ್ಕಾಚಾರದಲ್ಲಿ ರಿಲಯನ್ಸ್ ಜಿಯೊಗೆ ೧.೫೯ ಲಕ್ಷ, ಭಾರ್ತಿ ಏರ್‌ಟೆಲ್‌ಗೆ ೬೬,೩೩೦ ಮತ್ತು ವೊಡಾಫೋನ್ ಐಡಿಯಾಗೆ ೨೯,೩೭೦ ಮತ್ತು ಅದಾನಿ ಡೇಟಾ ನೆಟ್‌ವರ್ಕ್ಸ್‌ಗೆ ೧,೬೫೦ ಅಂಕಗಳು ಲಭಿಸಿದೆ.
ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯ ತನಕ ಹರಾಜು ನಡೆಯಲಿದೆ.