Site icon Vistara News

5G Spectrum: 11,300 ಕೋಟಿ ರೂ. ಮೌಲ್ಯದ 5ಜಿ ತರಂಗ ಹರಾಜು; ಭಾರ್ತಿ ಏರ್‌ಟೆಲ್‌ ಮುಂಚೂಣಿ

5G Spectrum

5G spectrum auctions: Bharti Airtel likely largest bidder, govt mops up around Rs 11,300 crore

ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ 5ಜಿ ತರಂಗಗಳ ಹರಾಜು (5G Spectrum) ಪ್ರಕ್ರಿಯೆ ಭಾನುವಾರ ಮುಕ್ತಾಯಗೊಂಡಿದೆ. ಕೇಂದ್ರ ಸರ್ಕಾರವು (Central Government) 11,300 ಕೋಟಿ ರೂಪಾಯಿಗೆ 5ಜಿ ತರಂಗ ಹರಾಜು ಮಾಡಿದ್ದು, ದೇಶದ ಪ್ರಮುಖ ಖಾಸಗಿ ಟೆಲಾಕಾಂ ಕಂಪನಿಯಾದ ಭಾರ್ತಿ ಏರ್‌ಟೆಲ್‌ (Bharti Airtel) 6,857 ಕೋಟಿ ರೂ.ಗೆ ತರಂಗಗಳನ್ನು ಖರೀದಿಸುವ (5G Spectrum Auctions) ಮೂಲಕ ಹರಾಜಿನಲ್ಲಿ ಬೃಹತ್‌ ಬಿಡ್ಡರ್‌ ಎನಿಸಿದೆ.

ಭಾರ್ತಿ ಏರ್‌ಟೆಲ್‌ ಕಂಪನಿಯು 97 ಎಂಎಚ್‌ಝಡ್‌ (ಮೆಗಾ ಹರ್ಟ್ಸ್‌) ತರಂಗಗಳನ್ನು 6,857 ಕೋಟಿ ರೂ. ಪಾವತಿಸಿ 20 ವರ್ಷಗಳಿಗಾಗಿ ಖರೀದಿಸಿದೆ. “ಗ್ರಾಹಕರಿಗೆ ಅತ್ಯುತ್ತಮ, ಅತ್ಯಾಧುನಿಕ ಹಾಗೂ ಕ್ಷಿಪ್ರಗತಿಯ ಸೇವೆಗಳನ್ನು ಒದಗಿಸುವ ದಿಸೆಯಲ್ಲಿ ಭಾರ್ತಿ ಏರ್‌ಟೆಲ್‌ ಕಂಪನಿಯು 5ಜಿ ತರಂಗಗಳನ್ನು ಖರೀದಿಸಿದೆ. ಇದರಿಂದ ದೇಶದ ಮೂಲೆ ಮೂಲೆಗಳಿಗೂ 5ಜಿ ಸೇವೆಯನ್ನು ವಿಸ್ತರಿಸುವ ನಮ್ಮ ಉದ್ದೇಶಕ್ಕೆ ಈಗ ಬಲ ಬಂದಂತಾಗಿದೆ” ಎಂದು ಹರಾಜು ಪ್ರಕ್ರಿಯೆ ಮುಗಿದ ಬಳಿಕ ಕಂಪನಿಯ ಎಂಡಿ ಹಾಗೂ ಸಿಇಒ ಗೋಪಾಲ್‌ ವಿಠಲ್‌ ಮಾಹಿತಿ ನೀಡಿದ್ದಾರೆ.

ತರಂಗಗಳ ಹರಾಜು ಮೊತ್ತ ಕುಸಿತ

ತರಂಗಗಳ ಹರಾಜು ಪ್ರಕ್ರಿಯೆಗೆ 2022ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಮೊತ್ತ ಲಭಿಸಿದೆ. 2022ರಲ್ಲಿ 72,097 ಎಂಎಚ್‌ಝಡ್‌ ರೇಡಿಯೊ ತರಂಗಗಳ ಮಾರಾಟದಿಂದ 1.5 ಲಕ್ಷ ಕೋಟಿ ರೂ. ಆದಾಯ ಲಭಿಸಿತ್ತು. ಆ ವರ್ಷದಲ್ಲಿ ಕೇಂದ್ರ ಸರ್ಕಾರವು ಮೊದಲ ಬಾರಿಗೆ 5ಜಿ ತರಂಗಗಳ ಹರಾಜು ನಡೆಸಿತ್ತು. ಆ ವರ್ಷ ಸರ್ಕಾರವು ತರಂಗಗಳ ಹರಾಜಿನಿಂದ ದಾಖಲೆ ಮೊತ್ತದ ಆದಾಯ ಗಳಿಸಿತ್ತು. ಮುಕೇಶ್‌ ಅಂಬಾನಿ ಅವರ ಜಿಯೋ ಒಂದೇ ಸುಮಾರು 88 ಸಾವಿರ ಕೋಟಿ ರೂ. ಕೊಟ್ಟು 5ಜಿ ತರಂಗಗಳನ್ನು ಖರೀದಿಸಿತ್ತು.

ಎರಡನೇ ದಿನದ (ಬುಧವಾರ-ಜೂನ್‌ 26) ಹರಾಜಿನಲ್ಲಿ ಕೇಂದ್ರ ಸರ್ಕಾರವು ಸುಮಾರು 96,238 ಕೋಟಿ ರೂ. ಮೌಲ್ಯದ ತರಂಗಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿತ್ತು. ಆದರೆ, ಸರ್ಕಾರದ ಗುರಿಯಲ್ಲಿ ಶೇ.12ರಷ್ಟು ಗುರಿ ಮಾತ್ರ ಸಾಧಿಸಲಾಯಿತು ಎಂದು ತಿಳಿದುಬಂದಿದೆ. ದೇಶದಲ್ಲಿ ಜಿಯೋ, ಏರ್‌ಟೆಲ್‌ ಸೇರಿ ಹಲವು ಟೆಲಿಕಾಮ್‌ ಕಂಪನಿಗಳು 5 ಜಿ ಸೇವೆಗಳನ್ನು ಒದಗಿಸುತ್ತಿವೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಯು ಲಭ್ಯವಿದೆ. ಈಗಾಗಲೇ ಕೇಂದ್ರ ಸರ್ಕಾರವು 6ಜಿ ಅಳವಡಿಕೆಗೆ ಚಿಂತನೆ ನಡೆಸಿದೆ.

ಇದನ್ನೂ ಓದಿ: 5G India: ಭಾರತದ 5ಜಿ ವೇಗಕ್ಕೆ ಸಾಟಿ ಇಲ್ಲ; ನಮ್ಮ ಸ್ಪೀಡ್‌ ಮುಂದೆ ಜಪಾನ್‌, ಬ್ರಿಟನ್‌ ಕೂಡ ಹಿಂದೆ!

Exit mobile version