ಬೆಂಗಳೂರು: ಟೊಮೆಟೊ ದರದಲ್ಲಿ ಕಳೆದ ಒಂದೇ ತಿಂಗಳಿನಲ್ಲಿ ೬೦% ಕುಸಿತ ಉಂಟಾಗಿದೆ. ಕಳೆದ ಜೂನ್‌ನಲ್ಲಿ ಪ್ರತಿ ಕೆ.ಜಿಗೆ ೧೦೦ ರೂ.ನಷ್ಟಿದ್ದ ಟೊಮೆಟೊ ದರ ಇದಿಗ ೪೦ ರೂ. ಆಸುಪಾಸಿಗೆ ಇಳಿಕೆಯಾಗಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಜೂನ್‌ನಲ್ಲಿ ಆಲೂಗಡ್ಡೆ ಮತ್ತು ಟೊಮೆಟೊದ ಹಣದುಬ್ಬರ ಅನುಕ್ರಮವಾಗಿ ೨೩.೮೬% ಮತ್ತು ೧೫೮.೭೮% ಏರಿಕೆಯಾಗಿತ್ತು. ದಿನ ನಿತ್ಯ ವ್ಯಾಪಕವಾಗಿ ಬಳಕೆಯಲ್ಲಿರುವ ಟೊಮೆಟೊ ದರ ಇಳಿಕೆಯಿಂದ ಜುಲೈನಲ್ಲಿ ಹಣದುಬ್ಬರ ಇಳಿಕೆಗೆ ಪ್ರಯೋಜನವಾಗುವ ಸಾಧ್ಯತೆ ಇದೆ.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಟೊಮೆಟೊ ಉತ್ಪಾದನೆ ಹೆಚ್ಚಳವಾಗಿದ್ದು, ಮಾರುಕಟ್ಟೆಗೆ ಪೂರೈಕೆ ಸುಧಾರಿಸಿದೆ. ಶಿಮ್ಲಾ, ಕೋಲಾರ, ಬಾಗೆಪಳ್ಳಿ, ಚಿಂತಾಮಣಿ ಇತ್ಯಾದಿ ಪ್ರದೇಶಗಳಿಂದ ಟೊಮೆಟೊ ಪೂರೈಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಟೊಮೆಟೊ ಟ್ರೇಡರ್ಸ್ ಅಸೊಸಿಯೇಶನ್‌ನ ಅಧ್ಯಕ್ಷ ಅಶೋಕ್ ಕೌಶಿಕ್ ತಿಳಿಸಿದ್ದಾರೆ. ಬಿಸಿಗಾಳಿ, ತಾಪಮಾನ ಏರಿಕೆಯ ಪರಿಣಾಮ ಕಳೆದ ಮೇ-ಜೂನ್‌ನಲ್ಲಿ ಟೊಮೆಟೊ ಉತ್ಪಾದನೆ ಕುಸಿದಿತ್ತು. ಪರಿಣಾಮ ದರ ಭಾರಿ ಏರಿಕೆಯಾಗಿತ್ತು.
ದೇಶದಲ್ಲಿ ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳು: ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಹಿಮಾಚಲ ಪ್ರದೇಶ.