ನವ ದೆಹಲಿ: ಅದಾನಿ ಗ್ರೂಪ್ (Adani group) ನೀಡಿರುವ 413 ಪುಟಗಳ ಉತ್ತರಗಳಲ್ಲಿ ತನ್ನ 88 ಪ್ರಶ್ನೆಗಳ ಪೈಕಿ 62ಕ್ಕೆ ಉತ್ತರ ಇಲ್ಲ ಎಂದು ಎಂದು ನ್ಯೂಯಾರ್ಕ್ ಮೂಲದ ಹಿಂಡೆನ್ ಬರ್ಗ್ ಸೋಮವಾರ ತಿಳಿಸಿದೆ. ಅಕೌಂಟಿಂಗ್‌ನಲ್ಲಿ ಅವ್ಯಹಾರ, ಷೇರುಗಳ ವಹಿವಾಟಿನಲ್ಲಿ ನಡೆಸಿರುವ ಅಕ್ರಮಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಆದರೆ ಈ ಮೂಲಕ ಸಾಮಾನ್ಯ ಜ್ಞಾನವನ್ನೂ ಅದಾನಿ ಸಮೂಹ ತಳ್ಳಿ ಹಾಕಿದೆ ಎಂದು ಟೀಕಿಸಿದೆ.
ಅದಾನಿ ಗ್ರೂಪ್‌ನ 413 ಪುಟಗಳ ಪ್ರತಿಕ್ರಿಯೆಯಲ್ಲಿ 30 ಪುಟಗಳಷ್ಟು ಮಾತ್ರ ವಿಚಾರಗಳು ನಮ್ಮ ವರದಿಗೆ ಸಂಬಂಧಿಸಿವೆ. ಉಳಿದ 330 ಪುಟಗಳು ಕೋರ್ಟ್ ದಾಖಲೆಗಳು ಹಾಗೂ 53 ಪುಟಗಳು ಇತರ ಸಾಮಾನ್ಯ ವಿವರಗಳಾಗಿವೆ ಎಂದು ಹಿಂಡೆನ್‌ಬರ್ಗ್ ಟೀಕಿಸಿದೆ.
ಅದಾನಿ ಗ್ರೂಪ್ ಭಾರತದ ಅಭಿವೃದ್ಧಿಯ ಬಾವುಟವನ್ನು ತಾನು ಹಿಡಿದಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಆದರೆ ವ್ಯವಸ್ಥಿತವಾಗಿ ದೇಶವನ್ನು ಲೂಟಿ ಹೊಡೆಯುತ್ತಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ.
ಕಳೆದ ಶುಕ್ರವಾರ 20% ತನಕ ಕುಸಿದಿದ್ದ ಅದಾನಿ ಗ್ರೂಪ್‌ನ ಕೆಲ ಕಂಪನಿಗಳ ಷೇರುಗಳು ಸೋಮವಾರ ಬೆಳಗ್ಗೆ ಚೇತರಿಸಿತ್ತು. ಆದರೂ ಅನಿಶ್ಚಿತತೆ ಮುಂದುವರಿದಿದೆ. ಉದಾಹರಣೆಗೆ ಅದಾನಿ ಎಂಟರ್‌ಪ್ರೈಸಸ್ ಷೇರು ದರ ಬೆಳಗ್ಗೆ 11.30ಕ್ಕೆ 1.71% ಚೇತರಿಸಿತ್ತು. ಆದರೆ ಅದಾನಿ ಪವರ್, ಅದಾನಿ ಪೋರ್ಟ್ ಷೇರು ದರ ಕುಸಿತ ಮುಂದುವರಿದಿತ್ತು.