Site icon Vistara News

ಸರಿಯಲಿಲ್ಲ ಕ್ರಿಪ್ಟೊ ಕರೆನ್ಸಿ ಮೇಲಿನ ತೂಗುಗತ್ತಿ!: ಕ್ರಿಪ್ಟೊ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು: ಅನೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಿಗೇ ಸವಾಲೊಡ್ಡುತ್ತ ಸಮಾನಾಂತರವಾಗಿ ಬೆಳೆಯುತ್ತಿರುವ ಕ್ರಿಪ್ಟೊ ಕರೆನ್ಸಿಗಳ ಮೇಲಿನ ತೂಗುಗತ್ತಿ ಭಾರತದಲ್ಲಿ ಸಂಪೂರ್ಣವಾಗಿ ಸರಿದಿಲ್ಲ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದ ಮಸೂದೆ ಚರ್ಚೆ ವೇಳೆ ಹಣಕಾಸು ಸಚಿವರ ಮಾತು ಇದಕ್ಕೆ ಪುಷ್ಠಿ ನೀಡಿದೆ. ಬಿಟ್‌ಕಾಯಿನ್‌ ಸೇರಿ ಸಾವಿರಾರು ಕ್ರಿಪ್ಟೊ ಕರೆನ್ಸಿಗಳನ್ನು ಬ್ಯಾನ್‌ ಮಾಡುವ ಕುರಿತು ಇನ್ನೂ ಚಿಂತನೆ ಜೀವಂತವಾಗಿದೆ. ಹಾಗಾಗಿ ಕ್ರಿಪ್ಟೊ ಕರೆನ್ಸಿ ವಹಿವಾಟಿಗೆ ಕೇಂದ್ರ ಸರ್ಕಾರ ತೆರಿಗೆ ಹಾಕಿದ ತಕ್ಷಣ ಅದನ್ನು ಅಧಿಕೃತ ಎಂದು ಪರಿಗಣಿಸಬಹುದು ಎಂಬ ವಾದ ಈಗ ಇಲ್ಲವಾಗಿದೆ.

ಆರ್‌ಬಿಐಗೆ ಸತತ ಹಿನ್ನಡೆ

ಕ್ರಿಪ್ಟೊ ಕರೆನ್ಸಿ ಭಾರತಕ್ಕೆ ಪ್ರವೇಶಿಸಿದಾಗ ಅದನ್ನು ನಿರ್ಬಂಧಿಸಲು ಸರ್ಕಾರ ಮುಂದಾಗಿತ್ತು. ಕ್ರಿಪ್ಟೊ ವ್ಯವಹಾರಗಳನ್ನು ಅನಧಿಕೃತ ಎಂದು ಸುತ್ತೋಲೆ ಹೊರಡಿಸಿ ಬ್ಯಾಂಕ್‌ಗಳು ಕ್ರಿಪ್ಟೊ ಕರೆನ್ಸಿಗಳನ್ನು ಒಪ್ಪಬಾರದು ಎಂದು ತಿಳಿಸಿತ್ತು. ಒಂದಲ್ಲ, ಎರಡಲ್ಲ, ಮೂರು ಬಾರಿ ಈ ರೀತಿ ಸುತ್ತೋಲೆ ಹೊರಡಿಸಿ ಕ್ರಿಪ್ಟೊ ಕರೆನ್ಸಿ ವಹಿವಾಟಿನ ಮೇಲೆ ಗಧಾಪ್ರಹಾರ ಮಾಡಲು ಮುಂದಾಗಿತ್ತು.

ಆದರೆ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಆರ್‌ಬಿಐ ಹೊರಡಿಸಿರುವ ಸುತ್ತೋಲೆಯನ್ನು 2020ರ ಆದೇಶದಲ್ಲಿ ಸುಪ್ರೀಂಕೋರ್ಟ್‌ ರದ್ದುಗೊಳಿಸಿತು. ಆನಂತರವೂ ಕ್ರಿಪ್ಟೊ ಕರೆನ್ಸಿಗಳನ್ನು ಅನೇಕ ಬ್ಯಾಂಕ್‌ಗಳು ಸ್ವೀಕರಿಸುತ್ತಿರಲಿಲ್ಲ. ಆರ್‌ಬಿಐನ ಹಳೆಯ ಸುತ್ತೋಲೆಯನ್ನೇ ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತಿತ್ತು. ಇದಕ್ಕಾಗಿ 2021ರ ಮೇ 31ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ ಆರ್‌ಬಿಐ, ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕ್ರಿಪ್ಟೊ ವಹಿವಾಟನ್ನು ಮಾನ್ಯ ಮಾಡಬಹುದು ಎಂದು ತಿಳಿಸಿತು. ಅಂದರೆ ಪ್ರಾರಂಭದಿಂದಲೂ ಕ್ರಿಪ್ಟೊ ಕರೆನ್ಸಿ ಕುರಿತು ಆರ್‌ಬಿಐ ಹಾಗೂ ಕೇಂದ್ರ ಸರ್ಕಾರ ನಕಾರಾತ್ಮಕ, ಅನುಮಾನದ ಹೆಜ್ಜೆಗಳನ್ನೇ ಇಡುತ್ತ ಬಂದವು. ಕೊನೆಗೂ ಕ್ರಿಪ್ಟೊ ಅಲೆಯನ್ನು ಎದುರಿಸಲಾಗದೆ ಹಿನ್ನಡೆಯೇ ಆಯಿತು.

ಏಪ್ರಿಲ್‌ 1ರಿಂದ 30% ತೆರಿಗೆ

ಇನ್ನು ಕ್ರಿಪ್ಟೊ ಕರೆನ್ಸಿಯನ್ನು ಬ್ಯಾನ್‌ ಮಾಡುವುದರಿಂದ ಫಲವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಕೊನೆಗೂ ಮನವರಿಕೆ ಆಗಿದೆ ಎಂದು 2022ರ ಬಜೆಟ್‌ ವೇಳೆ ತಿಳಿದುಬಂದಿತು. ಕ್ರಿಪ್ಟೊ ಕರೆನ್ಸಿ ವಹಿವಾಟಿನಿಂದ ಲಭಿಸುವ ಲಾಭದ ಮೇಲೆ ಬರೊಬ್ಬರಿ 30% ತೆರಿಗೆ ವಿಧಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು. ಇದರ ಜತೆಗೆ, ಎಷ್ಟು ವಹಿವಾಟು ನಡೆಯುತ್ತಿದೆ ಎನ್ನುವುದನ್ನು ಟ್ರ್ಯಾಕ್‌ ಮಾಡಲು 1% ಟಿಡಿಎಸ್‌ ಸಹ ವಿಧಿಸುವುದಾಗಿ ತಿಳಿಸಿದರು.

ಇದು ಭಾರೀ ತೆರಿಗೆಯಾದರೂ, ಕೊನೆ ಪಕ್ಷ ಕೇಂದ್ರ ಸರ್ಕಾರ ಕ್ರಿಪ್ಟೊ ಕರೆನ್ಸಿಯನ್ನುಅಧಿಕೃತ ಎಂದು ಪರೋಕ್ಷವಾಗಯಾದರೂ ಒಪ್ಪಿಕೊಂಡಿತು ಎಂದು ವಹಿವಾಟುದಾರರು, ಉದ್ಯಮಿಗಳು ಸಂತಸಪಟ್ಟಿದ್ದರು.

ಇನ್ನೂ ಇದೆ ತೂಗುಗತ್ತಿ

ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಹಣಕಾಸು ಮಸೂದೆ ಕುರಿತು ಚರ್ಚೆ ವೇಳೆಯಲ್ಲೆ ಕ್ರಿಪ್ಟೊ ಕುರಿತ ತಿದ್ದುಪಡಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಪ್ರಕಾರ, ಒಂದು ವರ್ಚುವಲ್‌ ಡಿಜಿಟಲ್‌ ಕರೆನ್ಸಿ(ವಿಡಿಎ) ಉಂಟಾದ ನಷ್ಟವನ್ನು ಇನ್ನೊಂದು ವಿಡಿಯೆ ವಹಿವಾಟಿನಿಂದ ಲಭಿಸಿದ ಲಾಭದೊಂದಿಗೆ ಸೆಟ್‌ ಆಫ್‌ ಮಾಡಿಕೊಳ್ಳುವಂತಿಲ್ಲ.

ಈಗಾಗಲೆ ಕೇಂದ್ರ ಸರ್ಕಾರ ತಿಳಿಸಿರುವಂತೆ, ಕ್ರಿಪ್ಟೊ ಕರೆನ್ಸಿಯಲ್ಲಿ ಲಾಭ ದೊರೆತರೆ 30% ಸರ್ಕಾರಕ್ಕೆ ಕೊಡಬೇಕು. ಆದರೆ ಅದರಲ್ಲಿ ನಷ್ಟ ಉಂಟಾಗಿದೆ ಎಂದು ತೋರಿಸಿ ತೆರಿಗೆ ಲಾಭ ಪಡೆಯಲು ಅವಕಾಶವಿಲ್ಲ. ಅಂದರೆ, ಲಾಭ ದೊರೆತರೆ ಸರ್ಕಾರದ ಹೊಟ್ಟೆಗೆ, ನಷ್ಟವಾದರೆ ಹೂಡಿಕೆದಾರರ ಹೆಗಲಿಗೆ !

ಇಷ್ಟೆಲ್ಲ ಚರ್ಚೆಗಳ ನಡುವೆ ಶುಕ್ರವಾರ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್‌, ಕ್ರಿಪ್ಟೊ ಕರೆನ್ಸಿ ಕುರಿತು ಸರ್ಕಾರಕ್ಕೆ ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ. ಕ್ರಿಪ್ಟೊ ಕರೆನ್ಸಿ ವಹಿವಾಟಿನ ಮೇಲೆ ತೆರಿಗೆ ವಿಧಿಸಿದ ತಕ್ಷಣವೇ ಅದು ಅಧಿಕೃತ ಎಂದಲ್ಲ. ಇಷ್ಟು ದೊಡ್ಡ ಹಣಕಾಸು ವ್ಯವಹಾರ ನಡೆಯುತ್ತಿರುವದರಿಂದ ಸರ್ಕಾರ ತೆರಿಗೆ ವಿಧಿಸುತ್ತಿದೆ. ಅದು ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ತಿಳಿಯುವ ಸಲುವಾಗಿ 1% ಟಿಡಿಎಸ್‌ ವಿಧಿಸಲಾಗುತ್ತಿದೆ. ಇನ್ನು ಅದನ್ನು ಅಧಿಕೃತಗೊಳಿಸಬೇಕೆ, ತೆರಿಗೆ ಕೈಬಿಡಬೇಕೆ, ಬ್ಯಾನ್‌ ಮಾಡಬೇಕೆ ಎಂಬ ಕುರಿತು ವಿಸ್ತೃತವಾದ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಯ ಫಲಿತಾಂಶದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಜೂಜಿನ ರೀತಿ ಅಷ್ಟೆ

ಇದೆ ವೇಳೆ ಕೇಂದ್ತ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲೂ ಈ ಬಗ್ಗೆ ಮಾತನಾಡಿದ್ದಾರೆ. ಈಗಾಗಲೆ ದೇಶದಲ್ಲಿ ಕುದುರೆ ಓಟ, ಜೂಜು ಸೇರಿ ಅನೇಕ ವಿಷಯಗಳಿಗೆ ತೆರಿಗೆ ವಿಧಿಸಲಾಗುತ್ತಿದೆ. ಕಾಲ್ಪನಿಕ ಲೆಕ್ಕಾಚಾರದಲ್ಲಿ ನಡೆಯುವ ಇಂತಹ ವಹಿವಾಟುಗಳ ರೀತಿಯಲ್ಲೆ ಕ್ರಿಪ್ಟೊ ಕರೆನ್ಸಿಗೆ ತೆರಿಗೆ ವಿಧಿಸಲಾಗಿದೆಯೇ ವಿನಃ ಸಾಂಪ್ರದಾಯಿಕ ಆರ್ಥಿಕ ವಹಿವಾಟಿನ ರೀತಿ ಅಲ್ಲ. ಹಾಗಾಗಿ ಸರ್ಕಾರ ಕ್ರಿಪ್ಟೊ ಕರೆನ್ಸಿಯನ್ನು ಅಧಿಕೃತಗೊಳಿಸಿದೆ ಎಂದು ಯಾರೂ ಭಾವಿಸಬಾರದು. ಆದರೆ ಸದ್ಯಕ್ಕಂತೂ ಕ್ರಿಪ್ಟೊ ಖರೀದಿ ಅನಧಿಕೃತವಲ್ಲ ಎಂದಿದ್ದಾರೆ.

ಒಟ್ಟಾರೆ ಕೇಂದ್ರ ಸರ್ಕಾರದ ನಡೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇದೆ. ಭವಿಷ್ಯದಲ್ಲಿ ಕ್ರಿಪ್ಟೊ ಕರೆನ್ಸಿ ವಹಿವಾಟಿನ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಕಾದು ನೋಡಬೇಕು.

Exit mobile version