ಹೊಸದಿಲ್ಲಿ: ಭಾರತದಲ್ಲಿ ಈ ವರ್ಷಾಂತ್ಯದೊಳಗೆ 5ಜಿ ನೆಟ್‌ವರ್ಕ್ ಜಾರಿಯಾಗಲಿದೆ. ಜತೆಗೆ 6ಜಿ ನೆಟ್‌ವರ್ಕ್ ಸಂಬಂಧವೂ ಸರಕಾರ ಕಾರ್ಯಪ್ರವೃತ್ತವಾಗಿದೆ. 2030ರೊಳಗೆ 6ಜಿ ಜಾರಿಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ದೂರಸಂಪರ್ಕ ನಿಯಂತ್ರಕ ಟ್ರಾಯ್‌ನ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 5ಜಿ ನೆಟ್‌ವರ್ಕ್‌ನಿಂದ ದೇಶದ ಆರ್ಥಿಕತೆಗೆ 450 ಶತಕೋಟಿ ಡಾಲರ್ ( 34.65 ಲಕ್ಷ ಕೋಟಿ ರೂ.) ಆದಾಯ ದೊರೆಯುವ ನಿರೀಕ್ಷೆ ಇದೆ ಎಂದರು.
5ಜಿಯಿಂದ ಉದ್ಯೋಗ ಸೃಷ್ಟಿ
5ಜಿ ನೆಟ್‌ವರ್ಕ್ ಎಂದರೆ ಕೇವಲ ಇಂಟರ್‌ನೆಟ್‌ನ ವೇಗ ಹೆಚ್ಚಿಸುವುದು ಮಾತ್ರವಲ್ಲ. ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯೂ ಆಗುತ್ತದೆ. ಆಡಳಿತ ವ್ಯವಸ್ಥೆ ಮತ್ತು ಆರ್ಥಿಕತೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಇದು ತರಲಿದೆ. ಜನ ಜೀವನದ ಗುಣಮಟ್ಟ ವೃದ್ಧಿ, ಉದ್ಯಮಸ್ನೇಹಿ ವಾತಾವರಣಕ್ಕೆ ಇದು ಪೂರಕವಾಗಲಿದೆ ಎಂದು ವಿವರಿಸಿದರು.
ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅಭಿವೃದ್ಧಿಗೆ 5ಜಿ ನೆರವಾಗಲಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.
21ನೇ ಶತಮಾನದಲ್ಲಿ ಅಭಿವೃದ್ಧಿಗೆ ಮೂಲಸೌಕರ್ಯಗಳು ನಿರ್ಣಾಯಕವಾಗಲಿದೆ. ಈ ದಶಕದ ಅಂತ್ಯದ ವೇಳೆಗೆ 6ಜಿ ನೆಟ್ ವರ್ಕ್ ಅನ್ನೂ ಜಾರಿಗೊಳಿಸುವ ಗುರಿಯನ್ನು ಭಾರತ ಹೊಂದಿದೆ. ಈ ಸಂಬಂಧ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಯುಪಿಎ ಭ್ರಷ್ಟಾಚಾರಕ್ಕೆ ತರಾಟೆ
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ 2ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭ್ರಷ್ಟಾಚಾರ ನಡೆದಿತ್ತು. ಆಡಳಿತದ ಅದಕ್ಷತೆ ಮತ್ತು ಅವ್ಯವಹಾರಗಳ ದ್ಯೋತಕವಾಗಿತ್ತು. ಆದರೆ ತಮ್ಮ ಸರಕಾರ 4ಜಿಯಿಂದ 5ಜಿಗೆ ಅಭಿವೃದ್ಧಿ ಸಾಧಿಸಿದೆ. ಈ ಪರಿವರ್ತನೆಯಲ್ಲಿ ಟ್ರಾಯ್ ಮಹತ್ವದ ಪಾತ್ರ ವಹಿಸಿದೆ ಎಂದರು.
ಟೆಲಿಕಾಂ ವಲಯದಲ್ಲಿ ಸರಕಾರ ಆರೋಗ್ಯಕರ ಸ್ಪರ್ಧೆಗೆ ಹಾದಿ ಸುಗಮಗೊಳಿಸಿದೆ. ಇದರ ಪರಿಣಾಮ ಜಗತ್ತಿನಲ್ಲೇ ಅಗ್ಗದ ದರದಲ್ಲಿ ಡೇಟಾ ಸಿಗುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಭಾರತ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ 5ಜಿ ನೆಟ್ ವರ್ಕ್ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.
ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ದೇಶದ ವಿಜ್ಞಾನಿಗಳು ಮತ್ತು ತಂತ್ರಜ್ಞರ ಪರಿಶ್ರಮದಿಂದ ಸ್ವದೇಶಿ ತಂತ್ರಜ್ಞಾನದ 5ಜಿ ಅಭಿವೃದ್ಧಿಯಾಗುತ್ತಿದ್ದು, ವರ್ಷಾಂತ್ಯದೊಳಗೆ ಲಭಿಸಲಿದೆ ಎಂದರು. 6ಜಿ ಜಾರಿಯಾದರೆ ಸ್ಮಾರ್ಟ್ ಸಿಟಿ, ಆಗ್ಯುಮೆಂಟೆಡ್ ರಿಯಾಲಿಟಿ, ರೊಬಾಟಿಕ್ಸ್, ಎಐ ಇತ್ಯಾದಿಗಳಿಗೆ ಅನುಕೂಲವಾಗಲಿದೆ. ಜಪಾನ್ ಕೂಡ ದಶಕದೊಳಗೆ ಜಾರಿಗೆ ತರಲು ಯೋಜಿಸಿದೆ.
ಇದನ್ನೂ ಓದಿ: ಇಂಟರ್‌ನೆಟ್ ಲೋಕಕ್ಕೆ ಮಹಿಳೆಯರ ಬಿಗ್ ಎಂಟ್ರಿ