ನವದೆಹಲಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಪೆಟ್ರೋಲ್ ಪಂಪ್‌ಗಳ ಡೀಲರ್ ಗಳು ಮಂಗಳವಾರ ಸಾಂಕೇತಿಕವಾಗಿ ಮುಷ್ಕರ ನಡೆಸಿದರು. ಪೆಟ್ರೋಲ್-ಡೀಸೆಲ್ ಮಾರಾಟದಲ್ಲಿ ಕಮೀಶನ್ ಹೆಚ್ಚಳ, ಇತ್ತೀಚಿನ ಅಬಕಾರಿ ಸುಂಕ ಕಡಿತದ ಪರಿಣಾಮ ಉಂಟಾಗಿರುವ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಡೀಲರ್‌ಗಳು ಸಾಂಕೇತಿಕ ಮುಷ್ಕರ ನಡೆಸಿದರು.
ಮಂಗಳವಾರ ಸಾರ್ವಜನಿಕ ತೈಲ ಕಂಪನಿಗಳಿಂದ ಪೆಟ್ರೋಲ್-ಡೀಸೆಲ್ ಖರೀದಿಸದೆ ಮುಷ್ಕರ ನಡೆಸಿದರು. ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸಿ ತಮ್ಮ ಬೇಡಿಕೆಗಳ ಬಗ್ಗೆ ಗಮನಸೆಳೆದರು. ಆದರೆ ಎಲ್ಲ ಪೆಟ್ರೋಲ್ ಪಂಪ್ ಸ್ಟೇಶನ್‌ಗಳು ಸಾರ್ವಜನಿಕ ಗ್ರಾಹಕರಿಗೆ ಮುಕ್ತವಾಗಿತ್ತು. ಆದ್ದರಿಂದ ಖರೀದಿದಾರರಿಗೆ ತೊಂದರೆ ಆಗಲಿಲ್ಲ.
ನಮ್ಮ ಬೇಡಿಕೆಗಳ ಬಗ್ಗೆ ಸರಕಾರ ಮತ್ತು ಸಾರ್ವಜನಿಕ ವಲಯದ ಗಮನ ಸೆಳೆಯುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ನಮಗೆ ಆಗಿರುವ ಅನ್ಯಾಯ ಬಗೆಹರಿಸಬೇಕು ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ವರ್ತಕರ ಒಕ್ಕೂಟದ ಅಧ್ಯಕ್ಷ ಬಸವೇಗೌಡ ತಿಳಿಸಿದರು.
ಕಳೆದ 5 ವರ್ಷಗಳಿಂದ ಡೀಲರ್‌ಗಳಿಗೆ ನೀಡುವ ಕಮೀಶನ್ ಮೊತ್ತ ಪರಿಷ್ಕರಣೆಯಾಗಿಲ್ಲ. ಒಪ್ಪಂದದ ಪ್ರಕಾರ ಪ್ರತಿ ಆರು ತಿಂಗಳಿಗೊಮ್ಮೆ ಕಮೀಶನ್ ಪರಿಷ್ಕರಣೆ ಆಗಬೇಕು. ಮತ್ತೊಂದು ಕಡೆ ಸಾರ್ವಜನಿಕ ತೈಲ ಕಂಪನಿಗಳು ಲಾಭ ಮಾಡುತ್ತಿವೆ. ಆದರೆ ಡೀಲರ್ ಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಅಬಕಾರಿ ಸುಂಕ ಕಡಿತದ ಪರಿಣಾಮ, ಕಡಿತಕ್ಕೂ ಮೊದಲು ಖರೀದಿಸಿದ್ದ ಡೀಲರ್‌ಗಳಿಗೆ 5-10 ಲಕ್ಷ ರೂ. ನಷ್ಟ ಉಂಟಾಗಿದೆ. ಇದನ್ನು ಭರಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಮೇ 31ಕ್ಕೆ ಪೆಟ್ರೋಲ್, ಡೀಸೆಲ್ ಡೀಲರ್‌ಗಳಿಂದ ಮುಷ್ಕರ