ಸಿಂಗಾಪುರ: ಅದಾನಿ ಗ್ರೂಪ್ ಮುಂದಿನ 10 ವರ್ಷಗಳಲ್ಲಿ 100 ಶತಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಧ್ಯಕ್ಷ ಗೌತಮ್ ಅದಾನಿ (Adani Group) ಅವರು ಹೇಳಿದ್ದಾರೆ.
ಸಿಂಗಾಪುರದಲ್ಲಿ ನಡೆದ ಫೋರ್ಬ್ಸ್ ಗ್ಲೋಬಲ್ ಸಿಇಒ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಭಾರತ ಇಂಧನವನ್ನು ರಫ್ತು ಮಾಡುವ ಸ್ಥಿತಿಗೆ ಪ್ರಗತಿ ಸಾಧಿಸಲಿದೆ. ಗ್ರೀನ್ ಹೈಡ್ರೋಜನ್ ಅನ್ನು ವ್ಯಾಪಕವಾಗಿ ಉತ್ಪಾದಿಸುವ ಪರಿಣಾಮ ಭಾರತ ಈ ಸಾಧನೆ ಮಾಡಲಿದೆ ಎಂದರು.
ಅದಾನಿ ಗ್ರೂಪ್ 45 ಗಿಗಾವ್ಯಾಟ್ ಹೈಬ್ರಿಡ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲಿದೆ. ಸೌರ ಶಕ್ತಿ ಫಲಕಗಳ ಉತ್ಪಾದನೆಗೆ ಮೂರು ಗಿಗಾ ಫ್ಯಾಕ್ಟರಿಗಳನ್ನು ನಿರ್ಮಿಸಲಿದೆ ಎಂದರು. ಸಮೂಹವಾಗಿ ಅದಾನಿ ಗ್ರೂಪ್ ಮುಂದಿನ ದಶಕದಲ್ಲಿ 100 ಬಿಲಿಯನ್ ಡಾಲರ್ (8 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಿದೆ. ಈ ಹೂಡಿಕೆಯಲ್ಲಿ 70% ಮೊತ್ತವು ಇಂಧನ ಉತ್ಪಾದನೆಗೆ ಮತ್ತು ಪರಿವರ್ತನೆಗೆ ವಿನಿಯೋಗವಾಗಲಿದೆ ಎಂದರು. ಅದಾನಿ ಸಮೂಹ ಈಗಾಗಲೇ ವಿಶ್ವದ ಅತಿ ದೊಡ್ಡ ಸೌರ ಶಕ್ತಿ ವಿದ್ಯುತ್ ಉತ್ಪಾದಕ ಎನ್ನಿಸಿದೆ.