ನವ ದೆಹಲಿ: ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಉಂಟಾಗಿರುವ ನಷ್ಟ 100 ಶತಕೋಟಿ ಡಾಲರ್‌ಗೆ (ಅಂದಾಜು 8 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. (Adani Group shares) ಈ ಭಾರಿ ನಷ್ಟ ಕಂಪನಿಗಳ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಕಾರ್ಪೊರೇಟ್ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.
ಸಿಟಿ ಗ್ರೂಪ್ ಅದಾನಿ ಸಮೂಹದ ಸೆಕ್ಯುರಿಟೀಸ್‌ಗಳ ಆಧಾರದಲ್ಲಿ ತನ್ನ ಗ್ರಾಹಕರಿಗೆ ಸಾಲ ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಅದಾನಿ ಸಮೂಹವು ಹಲವಾರು ವಿದೇಶಿ ಕಂಪನಿಗಳ ಜತೆಗೆ ಪಾಲುದಾರಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಉದಾಹರಣೆಗೆ ಫ್ರಾನ್ಸ್‌ನ ಟೋಟಲ್ ಎನರ್ಜಿ, ಅಬುಧಾಬಿಯ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ ಜತೆಗೆ ಹೂಡಿಕೆ ಮಾಡಿದೆ.
ವಿದೇಶಿ ಬ್ಯಾಂಕ್‌ಗಳು ನೀಡಿರುವ ಸಾಲ ಹೆಚ್ಚು
ಸಿಎಲ್‌ಎಸ್‌ಎ ಹಣಕಾಸು ಸಂಸ್ಥೆಯ ವರದಿ ಪ್ರಕಾರ, ಅದಾನಿ ಸಮೂಹದ ಪ್ರಮುಖ ಕಂಪನಿಗಳು ಪಡೆದಿರುವ ಸಾಲದ ಮೊತ್ತ ಕಳೆದ 3-4 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಒಟ್ಟು ಸಾಲದಲ್ಲಿ ಬ್ಯಾಂಕ್‌ಗಳು ಕೊಟ್ಟಿರುವ ಸಾಲ ಸುಮಾರು 40% ಆಗಿವೆ. ಉಳಿದ 60% ಸಾಲವನ್ನು ಬಾಂಡ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ವಿದೇಶಿ ಬ್ಯಾಂಕ್‌ಗಳು ನೀಡಿವೆ.
ಆರ್‌ಬಿಐ ಸೂಚನೆ
ಅದಾನಿ ಗ್ರೂಪ್‌ಗೆ ನೀಡಿರುವ ಸಾಲಗಳ ವಿವರಗಳನ್ನು ನೀಡುವಂತೆ ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಅದಾನಿ ಎಂಟರ್‌ಪ್ರೈಸಸ್ ತನ್ನ 20,000 ಕೋಟಿ ರೂ. ಎಫ್‌ಪಿಐ ಅನ್ನು ರದ್ದುಪಡಿಸಿದ ಬಳಿಕ ಆರ್‌ಬಿಐ ಈ ಸೂಚನೆಯನ್ನು ನೀಡಿದೆ.