ನವ ದೆಹಲಿ: ದೇಶದಲ್ಲಿ 5ಜಿ (5G ) ನೆಟ್‌ವರ್ಕ್ ಜಾರಿಯಾಗುವುದರಿಂದ ಮುಂದಿನ ಎರಡು ವರ್ಷಗಳಲ್ಲಿ 80,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
೫ಜಿ ತಂತ್ರಜ್ಞಾನದ ಪರಿಣಾಮವಾಗಿ ಕಂಪನಿಗಳು ಮಂದಿನ ಎರಡು ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಲಿವೆ. ಇದರ ಜತೆಗೆ ಬಿಡಿಭಾಗಗಳ ಉತ್ಪಾದನೆಯ ಉದ್ದಿಮೆಗಳೂ ವ್ಯಾಪಕವಾಗಿ ಬೆಳೆಯಲಿವೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಟೆಲಿಕಾಂ ಉದ್ದಿಮೆಯು ಭಾರತೀಯ ದೂರಸಂಪರ್ಕ ವಿಧೇಯಕ 2022ಕ್ಕೆ ತನ್ನ ಪ್ರತಿಕ್ರಿಯೆ, ಸಲಹೆಗಳನ್ನು ನೀಡಿದೆ. ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್‌ನ ಕಳವಳಗಳನ್ನೂ ಕೂಡ ಬಗೆಹರಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ನೂತನ ದೂರ ಸಂಪರ್ಕ ವಿಧೇಯಕದ ಪರಿಣಾಮ ತನ್ನ ಅಧಿಕಾರಗಳು ದುರ್ಬಲವಾಗುವ ಆತಂಕವನ್ನು ಟ್ರಾಯ್ ವ್ಯಕ್ತಪಡಿಸಿದೆ. ಆದರೆ ಅದರ ಕಳವಳಗಳನ್ನು ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಟೆಲಿಕಾಂ ಸೇವೆಯ ದರಗಳು, ಸೇವೆಯ ಗುಣಮಟ್ಟ ಪರಿಶೀಲನೆಯ ಅಧಿಕಾರಗಳು ಈಗ ಟ್ರಾಯ್ ಬಳಿ ಇವೆ. ಆದರೆ ಹೊಸ ವಿಧೇಯಕ ಜಾರಿಯಾದರೆ, ದೂರ ಸಂಪರ್ಕ ಇಲಾಖೆಗೂ ಈ ಅಧಿಕಾರಗಳು ಸಿಗಲಿದ್ದು, ತನ್ನ ಅಧಿಕಾರ ದುರ್ಬಲವಾಗಬಹುದು ಎಂಬ ಕಳವಳವನ್ನು ಟ್ರಾಯ್ ವ್ಯಕ್ತಪಡಿಸಿದೆ.