ಮುಂಬಯಿ: ಭಾರತೀಯ ಸ್ಟಾರ್ಟಪ್‌ಗಳು ಅಮೆರಿಕದಲ್ಲಿನ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ( Silicon Valley Bank) 8,200 ಕೋಟಿ ರೂ. ಠೇವಣಿಯನ್ನು ಹೊಂದಿವೆ (Indian startups ) ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ದಿವಾಳಿಯಾಗಿ ಮುಚ್ಚಿದೆ. ಠೇವಣಿದಾರರು ಒಂದೇ ದಿನ 42 ಶತಕೋಟಿ ಡಾಲರ್ (3.44 ಲಕ್ಷ ಕೋಟಿ ರೂ.) ಹಿಂತೆಗೆದುಕೊಂಡಿದ್ದರು. ನೂರಾರು ಭಾರತೀಯ ಸ್ಟಾರ್ಟಪ್‌ಗಳೂ ಎಸ್‌ವಿಬಿಯಲ್ಲಿ ಠೇವಣಿ ಹೂಡಿವೆ.
ಎಸ್‌ವಿಬಿ ಮುಚ್ಚಿರುವ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ನೂರಾರು ಸ್ಟಾರ್ಟಪ್‌ಗಳ ಮುಖ್ಯಸ್ಥರುಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೂ ಸಮಾಲೋಚನೆ ಮಾಡಿದ್ದಾರೆ.
ಅಮೆರಿಕದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ನೀಡುತ್ತಿದ್ದ ಕ್ಯಾಲಿಫೋರ್ನಿಯಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ( SVB Financial Group) ಇತ್ತೀಚೆಗೆ ಪತನವಾಗಿದೆ. 2008ರ ಬಳಿಕ ಅಲ್ಲಿನ ಅತಿ ದೊಡ್ಡ ಬ್ಯಾಂಕ್ ಇದೀಗ ಪತನವಾದಂತಾಗಿದೆ. ಬ್ಯಾಂಕ್‌ನ ವೈಫಲ್ಯದ ಪರಿಣಾಮ ನಾನಾ ಕಂಪನಿಗಳು, ಹೂಡಿಕೆದಾರರು, ಠೇವಣಿದಾರರ ಕೋಟ್ಯಂತರ ಡಾಲರ್ ಹಣ ಅತಂತ್ರವಾಗಿದೆ.
ಕೇವಲ 48 ಗಂಟೆಗಳಲ್ಲೇ ಬ್ಯಾಂಕ್ ಬಿಕ್ಕಟ್ಟು ಉಲ್ಬಣ
ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಬ್ಯಾಲೆನ್ಸ್‌ಶೀಟ್‌ನಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ 200 ಕೋಟಿ ಡಾಲರ್ ನಿಧಿಯನ್ನು ಸಂಗ್ರಹಿಸಲು ಉದ್ದೇಶಿಸಿರುವುದಾಗಿ ಘೋಷಿಸಿದ ಬಳಿಕ ಕೇವಲ 48 ಗಂಟೆಗಳಲ್ಲಿ ಹೂಡಿಕೆದಾರರು ಆತಂಕದಿಂದ ವ್ಯಾಪಕವಾಗಿ ಷೇರುಗಳನ್ನು ಮಾರಾಟ ಮಾಡಿದರು. ಹೀಗಾಗಿ ಬ್ಯಾಂಕ್ ನಿಧಿ ಸಂಗ್ರಹಿಸುವ ಯೋಜನೆಯನ್ನು ಕೈಬಿಟ್ಟಿತು. ಕಳೆದ ಶುಕ್ರವಾರವೇ ಅಮೆರಿಕದ ಫೆಡರಲ್ ಡಿಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್, (ಎಫ್‌ಡಿಐಸಿ) ಬ್ಯಾಂಕ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಎಸ್‌ವಿಬಿಯ ಷೇರು ದರದಲ್ಲಿ 60% ಕುಸಿತ ಸಂಭವಿಸಿದೆ. ಎಸ್‌ವಿಬಿಯನ್ನು ಹಣಕಾಸು ಇಲಾಖೆ ಮುಚ್ಚಿದೆ ಎಂದು ಎಫ್‌ಡಿಐಸಿ ತಿಳಿಸಿದೆ. ಎಸ್‌ವಿಬಿ ದಿವಾಳಿಯಾಗಿರುವುದು ಟೆಕ್ ಇಂಡಸ್ಟ್ರಿಯಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವಾಗಿದ್ದೇಕೆ?
ಅಮೆರಿಕದಲ್ಲಿ ಫೆಡರಲ್ ರಿಸರ್ವ್ 2023ರಲ್ಲಿ ಬಡ್ಡಿ ದರಗಳನ್ನು ಏರಿಸಿರುವುದು ಎಸ್‌ವಿಬಿ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬಡ್ಡಿ ದರಗಳು ಕೆಳಮಟ್ಟದಲ್ಲಿತ್ತು. ಬಳಿಕ ಅಮೆರಿಕದ ಫೆಡರಲ್ ರಿಸರ್ವ್, ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರಗಳನ್ನು ಪದೇಪದೆ ಏರಿಸಿತು. ಇದರ ಪರಿಣಾಮ ಕಡಿಮೆ ಬಡ್ಡಿ ದರದಲ್ಲಿ ಬಿಡುಗಡೆಗೊಳಿಸಿದ್ದ ಬಾಂಡ್‌ಗಳ ಮೌಲ್ಯ ಕುಸಿಯಿತು. ಈ ಬಾಂಡ್‌ಗಳನ್ನು ಬ್ಯಾಂಕ್‌ಗಳು ಖರೀದಿಸಿದ್ದವು. ಮೌಲ್ಯ ಕುಸಿತದ ಕಾರಣದಿಂದ ಬ್ಯಾಂಕ್‌ಗಳಿಗೆ ನಷ್ಟವಾಯಿತು. ಮತ್ತೊಂದು ಕಡೆ ಬಡ್ಡಿ ದರ ಏರಿಕೆ ಹಿನ್ನೆಲೆಯಲ್ಲಿ ಸ್ಟಾರ್ಟಪ್‌ಗಳಿಗೆ ಹೂಡಿಕೆ ಹರಿವು ಕಡಿಮೆಯಾಯಿತು. ಇದು ಹೂಡಿಕೆದಾರರ ಭಾವನೆಗಳನ್ನು ಘಾಸಿಗೊಳಿಸಿತು. ಎಸ್‌ವಿಬಿಯ ಗ್ರಾಹಕರು ತಮ್ಮ ನಗದು ವೆಚ್ಚಗಳಿಗೆ ಬ್ಯಾಂಕಿನಿಂದ ಠೇವಣಿಗಳನ್ನು ಹಿಂತೆಗೆದುಕೊಳ್ಳಲು ಶುರು ಮಾಡಿದರು. ಠೇವಣಿದಾರರು ವ್ಯಾಪಕವಾಗಿ ಹಣ ಹಿಂತೆಗೆದುಕೊಳ್ಳಲು ಆರಂಭಿಸಿದಾಗ ಕೊಡಲು ಬ್ಯಾಂಕಿನ ಬಳಿ ನಗದು ಕೊರತೆ ಉಂಟಾಯಿತು. ಈ ಒತ್ತಡವನ್ನು ನಿವಾರಿಸಲು ಬ್ಯಾಂಕ್ ಕೋಟ್ಯಂತರ ಡಾಲರ್ ಮೌಲ್ಯದ ತನ್ನ ಬಾಂಡ್‌ಗಳನ್ನು ನಷ್ಟದಲ್ಲಿ ಮಾರಾಟ ಮಾಡಿತು. ಈ ನಷ್ಟವನ್ನು ಭರ್ತಿಗೊಳಿಸಲು ತನ್ನ 2.25 ಶತಕೋಟಿ ಡಾಲರ್ (18,450 ಕೋಟಿ ರೂ.) ಷೇರುಗಳನ್ನು (ಈಕ್ವಿಟಿ) ಮಾರುವುದಾಗಿ ಬ್ಯಾಂಕ್ ಘೋಷಿಸಿತು. ಈ ದಿಢೀರ್ ಬೆಳವಣಿಗೆಯು ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್ ಬಗ್ಗೆ ಕಳವಳ ಹೆಚ್ಚಿಸಿತು. ಷೇರು ದರ 60% ಕುಸಿಯಿತು. ಎಸ್‌ವಿಬಿ ಪತನಕ್ಕೆ ಮುನ್ನ ಸಿಲ್ವರ್‌ಗೇಟ್ ಕ್ಯಾಪಿಟಲ್ ಎಂಬ ಕ್ರಿಪ್ಟೊ ಆಧರಿತ ಬ್ಯಾಂಖ್ ಮುಚ್ಚಿತ್ತು. ಇದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿತ್ತು. ವೆಂಚರ್ ಕ್ಯಾಪಿಟಲ್ ಕಂಪನಿಗಳ ಸಲಹೆಯ ಮೇರೆಗೆ ಹೂಡಿಕೆದಾರರು ಬ್ಯಾಂಕ್‌ನಿಂದ ತಮ್ಮ ಹಣವನ್ನು ಒಂದೇ ಸಮನೆ ಹಿಂತೆಗೆದುಕೊಂಡಿದ್ದರಿಂದ, ಬ್ಯಾಂಕಿಗೆ ಷೇರು ಮಾರಾಟ ಮಾಡದೆ ವಿಧಿ ಇರಲಿಲ್ಲ. ಆದರೆ ಅದು ಸಫಲವಾಗಲಿಲ್ಲ.
ಭಾರತದ ಷೇರು ಪೇಟೆ ಮೇಲೆ ಪ್ರಭಾವ?
ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವು ಭಾರತದ ಬ್ಯಾಂಕಿಂಗ್ ಮೇಲೆ ಯಾವುದೇ ಪ್ರತಿಕೂಲ ಪ್ರಭಾವ ಬೀರದು. ದೊಡ್ಡ ಪ್ರಮಾಣದ ನಕಾರಾತ್ಮಕ ಪರಿಣಾಮ ಸಾಧ್ಯತೆ ಇಲ್ಲ ಎನ್ನುತ್ತಾರೆ ತಜ್ಞರು.
ಎಸ್‌ವಿಬಿ ಖರೀದಿಸಲು ಎಲಾನ್ ಮಸ್ಕ್ ಆಸಕ್ತಿ:
ಪತನವಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಖರೀದಿಸಲು ಅಮೆರಿಕದ ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ ಉತ್ಸುಕರಾಗಿದ್ದಾರೆ. ರೇಜರ್ ಸಿಇಒ ಮಿನ್ ಲಿಯಾಂಗ್ ಅವರು ಎಸ್‌ವಿಬಿಯನ್ನು ಮಸ್ಕ್ ಖರೀದಿಸಬಹುದು ಮತ್ತು ಡಿಜಿಟಲ್ ಬ್ಯಾಂಕ್ ಆಗಿಸಬಹುದು ಎಂದು ಟ್ವೀಟ್ ಮಾಡಿದ್ದಕ್ಕೆ, ಈ ಬಗ್ಗೆ ಆಲೋಚಿಸುವುದಾಗಿ ಮಸ್ಕ್ ಪ್ರತಿಕ್ರಿಯಿಸಿದ್ದರು.