ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷ ನಾನಾ ಹಂತಗಳಲ್ಲಿ ರೆಪೊ ದರದಲ್ಲಿ ಒಟ್ಟು 2.25% ಏರಿಕೆ ಮಾಡಿದೆ. ಹೀಗಾಗಿ ಗೃಹ ಸಾಲಗಾರರ ಈಗಿನ 7% ಗೃಹ ಸಾಲವು 2023ರ (Repo rate hike ) ಜನವರಿಯಿಂದ 9.25%ಕ್ಕೆ ಏರಿಕೆಯಾಗಲಿದೆ. ಮುಖ್ಯವಾಗಿ ರೆಪೊ ದರ ಆಧಾರಿತ ಸಾಲಗಳಿಗೆ ಇದು ಅನ್ವಯವಾಗಲಿದೆ.
ಉದಾಹರಣೆಗೆ 62 ಸಾವಿರ ರೂ. ಮಾಸಿಕ ವೇತನ ಪಡೆಯುವ ವ್ಯಕ್ತಿಯೊಬ್ಬ 20 ವರ್ಷಗಳ ಅವಧಿಗೆ 40 ಲಕ್ಷ ರೂ. ಗೃಹ ಸಾಲ ಪಡೆದಿದ್ದರೆ, ಈ ಬಡ್ಡಿ ದರ ಏರಿಕೆಯ ಪರಿಣಾಮ ಇಎಂಐ 31,012 ರೂ.ಗಳಿಂದ 36,485 ರೂ.ಗೆ ಏರಿಕೆಯಾಗಲಿದೆ. ಆದರೆ ವೇತನದಾರರಿಗೆ 10% ವೇತನ ಏರಿಕೆಯಾದರೂ, ಈ ಇಎಂಐ ಅನ್ನು ಭರಿಸಲು ಉಪಯುಕ್ತ ಎನ್ನಿಸದು ಎನ್ನುತ್ತಾರೆ ತಜ್ಞರು.
ಸಂಬಳದಲ್ಲಿ ಬಹುಪಾಲು ಇಎಂಐ ಕಟ್ಟಲು ಸಲ್ಲಿಕೆ
ಬ್ಯಾಂಕ್‌ಗಳು ಸಾಮಾನ್ಯವಾಗಿ ನಿವ್ವಳ ವೇತನದ 50%ಗಿಂತ ಕೆಳಗಿರುವಂತೆ ಇಎಂಐ ಅನ್ನು ನಿಗದಿಪಡಿಸುತ್ತವೆ. ಉದಾಹರಣೆಗೆ ಒಬ್ಬ ವ್ಯಕ್ತಿ 62,000 ರೂ. ನಿವ್ವಳ ವೇತನ ಪಡೆಯುತ್ತಿದ್ದರೆ, ಬೇರೆ ಯಾವುದೇ ಸಾಲ ಇರದಿದ್ದರೆ, (2022ರ ಮಾರ್ಚ್) 40 ಲಕ್ಷ ರೂ. ಸಾಲ ಸಿಗಬಹುದು. ಇದಕ್ಕೆ 7% ಬಡ್ಡಿ ಹಾಗೂ 20 ವರ್ಷಗಳ ಮರು ಪಾವತಿ ಅವಧಿ ಇರುತ್ತದೆ ಎಂದಿಟ್ಟುಕೊಳ್ಳಿ. ಆರಂಭಿಕ ಇಎಂಐ 31,012 ರೂ. ಇರುತ್ತದೆ. ಆದರೆ ರೆಪೊ ದರದಲ್ಲಿ 2.25% ಏರಿಕೆಯ ಪರಿಣಾಮ ಹೊಸ ಬಡ್ಡಿ ದರ ಜನವರಿ 2023ರಿಂದ 9.25% ಆಗುತ್ತದೆ. ಇದರಿಂದಾಗಿ ಇಎಂಐ 36,485 ರೂ.ಗೆ ಏರಿಕೆಯಾಗುತ್ತದೆ. ಹೀಗಾಗಿ ಒಂದು ವೇಳೆ ಸಾಲಗಾರನ ವೇತನ ಏರಿಕೆ ಆಗದಿದ್ದರೆ, ಆತನ ಸಾಲದ 59% ಪಾಲು ಇಎಂಐ ಕಟ್ಟಲು ಹೋಗುತ್ತದೆ. ಒಂದು ವೇಳೆ ವೇತನದಲ್ಲಿ 10% ಹೆಚ್ಚಳವಾದರೂ, ನಿವ್ವಳ ವೇತನದ 53.50% ಪಾಲು ಇಎಂಐಗೆ ಬೇಕಾಗುತ್ತದೆ.
ಇಎಂಐಗೆ ವೇತನದಿಂದ % ಪಾವತಿ
ವಿಷಯ | ಮಾರ್ಚ್-22 | ಜನವರಿ-23 | ಜನವರಿ-23 |
ವೇತನ | ಹಳೆಯದು | ಅದೇ ವೇತನ | 10% ಹೆಚ್ಚಳ |
ನಿವ್ವಳ ವೇತನ | 62,000 ರೂ. | 62,000 ರೂ. | 68,200 ರೂ. |
ಗೃಹ ಸಾಲ ಒಟ್ಟು ಬಾಕಿ | 40 ಲಕ್ಷ ರೂ. | 39.30 ಲಕ್ಷ ರೂ. | 39.30 ಲಕ್ಷ ರೂ. |
ಉಳಿದ ಅವಧಿ | 20 ವರ್ಷ | 19.25 ವರ್ಷ | 19.25 ವರ್ಷ |
ಬಡ್ಡಿ ದರ | 7.00% | 9.25% | 9.25% |
ಗೃಹ ಸಾಲ ಇಎಂಐ | 31012 ರೂ. | 36485 ರೂ. | 36485 ರೂ. |
ಇಎಂಐಗೆ ವೇತನದ % ಪಾವತಿ | 50.02% | 58.84% | 53.50% |
ಇತ್ತೀಚೆಗೆ ಗೃಹ ಸಾಲ ತೆಗೆದುಕೊಂಡಿರುವವರಿಗೆ ಪರಿಣಾಮ ಹೆಚ್ಚು
ಗೃಹ ಸಾಲ ಪಡೆದು 5 ವರ್ಷಗಳು ಅಥವಾ ಹೆಚ್ಚು ಅವಧಿಯಿಂದ ಮರು ಪಾವತಿಸುತ್ತಿದ್ದರೆ, ಅಸಲು ಮೊತ್ತವನ್ನು ಹೆಚ್ಚು ಪಾವತಿಸಿದ್ದರೆ ಅವರಿಗೆ ರೆಪೊ ದರ ಹೆಚ್ಚಳ ಅಂಥ ಪರಿಣಾಮ ಬೀರದು. ಆದರೆ ಇತ್ತೀಚೆಗೆ ಸಾಲ ತೆಗೆದುಕೊಂಡವರಿಗೆ ಪರಿಣಾಮದ ತೀವ್ರತೆ ಹೆಚ್ಚು.
ಇತ್ತೀಚಿನ ಸಾಲಗಾರರು ಇಎಂಐ ಅನ್ನು ಹೇಗೆ ತಗ್ಗಿಸಬಹುದು?
ಹೊಸ ಸಾಲಗಾರರು ಇಎಂಐ ಮರು ಪಾವತಿಸಲು ಕಷ್ಟಪಡುತ್ತಿದ್ದರೆ, ಇಎಂಐ ಅವಧಿಯನ್ನು ವಿಸ್ತರಿಸಲು ಬ್ಯಾಂಕ್‌ಗೆ ಮನವಿ ಮಾಡಬಹುದು. ಆಗ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಆದರೆ ಗರಿಷ್ಠ ವಯೋಮಿತಿ ದಾಟಿದ್ದರೆ, ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸುವುದು ಸೂಕ್ತ.