ನವ ದೆಹಲಿ: ನೀವು ಅಮೆಜಾನ್, ಫ್ಲಿಪ್‌ಕಾರ್ಟ್ ಅಥವಾ ಇತರ ಇ-ಕಾಮರ್ಸ್ ಕಂಪನಿಯಿಂದ ಬಟ್ಟೆ ಬರೆ, ಟಿ.ವಿ, ರೆಫ್ರಿಜರೇಟರ್, ಟಿ.ವಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ಖರೀದಿಸಬಹುದು. ಜತೆಗೆ ಸರಿ ಹೊಂದುತ್ತಿಲ್ಲ ಎಂದು ಉತ್ಪನ್ನವನ್ನು ಹಿಂತಿರುಗಿಸಿರಬಹುದು. ಆರ್ಡರ್ ಅನ್ನು ರದ್ದುಪಡಿಸಿರಬಹುದು. ಆದರೆ ಇದರಿಂದ ಇ-ಕಾಮರ್ಸ್ ವಲಯದ ಕಂಪನಿಗಳು ನಷ್ಟ ಅನುಭವಿಸುತ್ತವೆ. ಹೀಗಾಗಿ ಗ್ರಾಹಕರಿಂದ ಆರ್ಡರ್‌ಗಳ ರಿಟರ್ನ್ ಪ್ರಮಾಣವನ್ನು ಗಣನೀಯ ಕಡಿತಗೊಳಿಸಲು ಕಸರತ್ತು ನಡೆಸುತ್ತಿವೆ. ಈ ಮೂಲಕ ಲೈಫ್‌ಸ್ಟೈಲ್ ಉತ್ಪನ್ನಗಳ ಮಾರಾಟದಲ್ಲಿ ಉಂಟಾಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಮುಂದಾಗಿವೆ. ಮುಖ್ಯವಾಗಿ ಕ್ಯಾಶ್ ಆನ್ ಡೆಲಿವರಿ ಪದ್ಧತಿಯನ್ನು ಮೊಟಕುಗೊಳಿಸುತ್ತಿವೆ.
ಕಳೆದ ಕೆಲ ವರ್ಷಗಳಿಂದ ಇ-ಕಾಮರ್ಸ್ ಕಂಪನಿಗಳು ಆರ್ಡರ್‌ಗಳ ರಿಟರ್ನ್ ಅನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವ ಮೂಲಕ ನಷ್ಟವನ್ನು ತಪ್ಪಿಸಲು ಉದ್ದೇಶಿಸಿವೆ. ಇದರ ಪರಿಣಾಮ ೨೦೨೧-೨೨ರಲ್ಲಿ ೧೬.೧೦% ಇದ್ದ ರಿಟರ್ನ್ ಆರ್ಡರ್‌ಗಳ ಪ್ರಮಾಣವು ೨೦೨೨-೨೩ರಲ್ಲಿ ೧೪.೮೬%ಕ್ಕೆ ಇಳಿಕೆಯಾಗಿದೆ ಎಂದು ಇ-ಕಾಮರ್ಸ್ ವಲಯದ ಸಲಹಾ ಸಂಸ್ಥೆಯಾಗಿರುವ ವಜೀರ್ ಅಡ್ವೈಸರ್ಸ್‌ನ ವರದಿ ತಿಳಿಸಿದೆ. ೧೫-೧೬% ಆರ್ಡರ್‌ಗಳು ರಿಟರ್ನ್ ಆಗುವುದನ್ನು ಇ-ಕಾಮರ್ಸ್ ಕಂಪನಿಗಳು ಗಂಭೀರವಾಗಿ ಪರಿಗಣಿಸಿವೆ. ಇದನ್ನು ತಗ್ಗಿಸದಿದ್ದರೆ ಕಂಪನಿಗಳು ಲಾಭ ಗಳಿಸುವುದು ಕಷ್ಟ ಎಂದು ವರದಿ ಎಚ್ಚರಿಸಿದೆ.
ಇದನ್ನೂ ಓದಿ | Startup investment| ಬೆಂಗಳೂರಿನ ಐಸ್ಟೆಮ್‌ನಲ್ಲಿ 51 ಕೋಟಿ ರೂ. ಹೂಡಿಕೆ
ಆರ್ಡರ್ ರಿಟರ್ನ್, ಡಿಸ್ಕೌಂಟ್‌ನಿಂದ ೪೫% ಆದಾಯ ನಷ್ಟ: ಇ-ಕಾಮರ್ಸ್ ಕಂಪನಿಗಳ ಸರಾಸರಿ ಆರ್ಡರ್ ಮೌಲ್ಯ ೨೦೦-೩೦೦ ರೂ. ಇರುತ್ತದೆ. ರಿಟರ್ನ್ ಆರ್ಡರ್‌ಗಳು ಹೆಚ್ಚುತ್ತಿರುವುದರಿಂದ ಇ-ಕಾಮರ್ಸ್ ಕಂಪನಿಗಳಿಗೆ ಆರ್ಡರ್ ನಷ್ಟ, ಲಾಜಿಸ್ಟಿಕ್ ವೆಚ್ಚ ಹಾಗೂ ಡಿಸ್ಕೌಂಟ್‌ನಿಂದ ಉಂಟಾಗುವ ನಷ್ಟ ಸೇರಿ ಒಟ್ಟು ೪೫% ಆದಾಯ ನಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ.
ಕ್ಯಾಶ್ ಆನ್ ಡೆಲಿವರಿ ಕಡಿತ ಪರಿಣಾಮಕಾರಿಯೇ?: ಇ-ಕಾಮರ್ಸ್ ಕಂಪನಿಗಳು ಆರ್ಡರ್‌ಗಳ ರಿಟರ್ನ್ ಅನ್ನು ಕಡಿಮೆ ಮಾಡುವ ಸಲುವಾಗಿ ಕ್ಯಾಶ್ ಆನ್ ಡೆಲಿವರಿ ಪದ್ಧತಿಯನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದರೂ. ಪ್ರಯೋಜನವಾಗುವ ಸಾಧ್ಯತೆ ಕಡಿಮೆ ಇದೆ. ಅದರ ಬದಲಿಗೆ ತಕ್ಷಣ ಆರ್ಡರ್‌ಗಳನ್ನು ಪೂರ್ಣಗೊಳಿಸಲು ಇ-ಕಾಮರ್ಸ್ ಕಂಪನಿಗಳು ಯತ್ನಿಸುತ್ತಿವೆ.
ಆನ್‌ಲೈನ್ ಆರ್ಡರ್‌ಗಳನ್ನು ಗ್ರಾಹಕರು ಹಿಂತೆಗೆದುಕೊಳ್ಳಲು ಹಲವು ಕಾರಣಗಳು ಇರಬಹುದು. ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವಾಗಿ ಉತ್ಪನ್ನದ ಬಗ್ಗೆ ಉಂಟಾಗುವ ಆಕರ್ಷಣೆ, ಉತ್ಪನ್ನ ಕೈಗೆ ಬಂದಾಗ ಕ್ಷೀಣಿಸಬಹುದು. ಮತ್ತೆ ಕೆಲವರು ಸಗಟಾಗಿ ಹಲವು ಉತ್ಪನ್ನಗಳನ್ನು ಆರ್ಡರ್ ಮಾಡುತ್ತಾರೆ. ಆದರೆ ಕೆಲವನ್ನು ಮಾತ್ರ ಕೊಳ್ಳುತ್ತಾರೆ. ಇದು ಕೂಡ ರಿಟರ್ನ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ | ಸತತ ಎರಡನೇ ವರ್ಷ ಸಂಬಳ ಬೇಡ ಎಂದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ