ಜಸ್ಟ್ ಡಾಗ್ಸ್! ಇದು ಸಾಕು ನಾಯಿಗಳ ಪೋಷಣೆಗೆ ಅಗತ್ಯವಿರುವ ಎಲ್ಲ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಟಾರ್ಟಪ್. ಪೂರ್ವಿ ಮತ್ತು ಆಶೀಷ್ ಆಂಟನಿ ಅವರು 2011ರಲ್ಲಿ ಸ್ಥಾಪಿಸಿದ ಜಸ್ಟ್ ಡಾಗ್ಸ್ ಕೇವಲ ಒಂದು ಮಳಿಗೆಯೊಂದಿಗೆ ಆರಂಭವಾದರೂ, ಈಗ ದೇಶದ 16 ನಗರಗಳಲ್ಲಿ 42 ಮಳಿಗೆಗಳನ್ನು ಹೊಂದಿದೆ. ಹಾಗೂ 20 ಲಕ್ಷ ಸಂತೃಪ್ತ ಗ್ರಾಹಕರನ್ನು ಒಳಗೊಂಡಿದೆ. ನಾಯಿಗಳಿಗೆ ಬೇಕಾಗುವ ಆಹಾರ, ಆಟಿಕೆ, ಸಂಕೋಲೆ, ಬೆಲ್ಟ್ ಇತ್ಯಾದಿ ಬಿಡಿಭಾಗಗಳು, ತರಬೇತಿ, ಪೋಷಣೆ ಎಲ್ಲ ಅಗತ್ಯಗಳನ್ನೂ ಜಸ್ಟ್ ಡಾಗ್ಸ್ ಒದಗಿಸುತ್ತದೆ. (Business success) ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳನ್ನು ಹೊಂದಿದೆ. ವಾರ್ಷಿಕ 100 ಕೋಟಿ ರೂ. ಬಿಸಿನೆಸ್ ನಡೆಸುತ್ತಿದೆ.
ನಾಯಿಗಳ ಮೇಲಿನ ಪ್ರೀತಿ, ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ!
ಆದರೆ ಈ ಯಶಸ್ಸಿನ ಹಿಂದೆ ಒಂದು ಕಥೆ ಇದೆ. ೯೦ರ ದಶಕದಲ್ಲಿ ಆಶಿಷ್ ಮುಂಬಯಿನಲ್ಲಿ ವಿದ್ಯಾರ್ಥಿಯಾಗಿದ್ದರು. ಆಗಲೇ ಮೊದಲ ಸಲ ಜರ್ಮನ್ ಶೆಪರ್ಡ್ ನಾಯಿ ಮರಿಯನ್ನು ಸಾಕಿದ್ದರು. ಬಳಿಕ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ನಲ್ಲಿ ಉದ್ಯೋಗಿಯಾದರು ಹಾಗೂ ಕೆಲಸದ ನಿಮಿತ್ತ ಅಹಮದಾಬಾದ್‌ಗೆ ಸ್ಥಳಾಂತರವಾದರು. ಅಹಮದಾಬಾದ್‌ನಲ್ಲಿ ಕಾರ್ಪೊರೇಟ್ ಟ್ರೈನರ್ ಆಗಿದ್ದ ಪೂರ್ವಿ ಎಂಬುವರನ್ನು ವಿವಾಹವಾದರು. ಅವರೂ ಶ್ವಾನ ಪ್ರಿಯೆ. ಆರು ನಾಯಿಗಳನ್ನು ಸಾಕಿದ್ದರು. ಅವರು ಶ್ವಾನಗಳ ಸಾಕಣೆ ಬಗ್ಗೆ ಎಷ್ಟೊಂದು ಆಸಕ್ತಿ ವಹಿಸಿದ್ದರೆಂದರೆ, ಬ್ಯಾಂಕ್ ಅವರನ್ನು ಮತ್ತೆ ಮುಂಬಯಿಗೆ ವರ್ಗಾಯಿಸಿದಾಗ, ನಾಯಿಗಳಿಗೋಸ್ಕರ ಉದ್ಯೋಗಕ್ಕೇ ರಾಜೀನಾಮೆ ನೀಡಿದರು!
ಐಸಿಐಸಿಐನಲ್ಲಿ ನನ್ನ ಬಾಸ್ ಮುಂಬಯಿಗೆ ವರ್ಗಾವಣೆ ಮಾಡಿದಾಗ ಆರು ನಾಯಿಗಳನ್ನು ಬಿಟ್ಟು ಹೋಗಲು ಸಿದ್ಧನಿರಲಿಲ್ಲ ಎನ್ನುತ್ತಾರೆ ಆಶೀಷ್.
ಆಶೀಷ್ ಅವರು ಐಸಿಐಸಿಐ ಬ್ಯಾಂಕ್‌ಗಿಂತ ಮೊದಲು ಯುನಿಲಿವರ್ , ಶೆಲ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಗ್ರಾಮೀಣ ವಲಯದಲ್ಲಿ ಮಾರುಕಟ್ಟೆಯನ್ನು ಹೆಚ್ಚಿಸುವ ಬಗ್ಗೆ ತಿಳಿದುಕೊಂಡಿದ್ದರು. ಆ ಅನುಭವವೂ ಅವರಿಗೆ ಪೆಟ್ ಕೇರ್ ಬಿಸಿನೆಸ್ ಅನ್ನು ವಿಸ್ತರಿಸಲು ಸಹಕರಿಸಿತು. 2010ರ ವೇಳೆಯಲ್ಲಿ ಸಾಕುಪ್ರಾಣಿಗಳ ಪೋಷಣೆಗೆ ಬೇಕಾಗುವ ಉತ್ಪನ್ನಗಳ ಪೂರೈಕೆಯಲ್ಲಿ ತೀವ್ರ ಕೊರತೆ ಇದ್ದುದನ್ನೂ ಆಶಿಷ್ ಕಂಡುಕೊಂಡಿದ್ದರು. ಹೀಗಾಗಿ ಸ್ನೇಹಿತರೊಂದಿಗೆ ಚರ್ಚಿಸಿ ಪೆಟ್ ಕೇರ್ ಶಾಪ್ ಒಂದನ್ನು ತೆರೆದರು. ಅಹಮದಾಬಾದ್‌ನಲ್ಲಿ 2011ರಲ್ಲಿ ಜಸ್ಟ್‌ಡಾಗ್ಸ್ ಹೀಗೆ ಆರಂಭವಾಯಿತು.
ಅಹಮದಾಬಾದ್‌ನಲ್ಲಿ ಶ್ವಾನಗಳ ಪೋಷಣೆಯ ಉತ್ಪನ್ನಗಳ ಮಾರಾಟಕ್ಕೆ ಬೇಕಾದ ಮಾರುಕಟ್ಟೆ ಇಲ್ಲ ಎಂದು ಆರಂಭದಲ್ಲಿ ಸ್ನೇಹಿತರು ವಾದಿಸಿದ್ದರು. ಗುಜರಾತಿಗಳು, ಮಾರ್ವಾಡಿಗಳು ಮತ್ತು ಜೈನರು ಅಷ್ಟಾಗಿ ನಾಯಿಗಳನ್ನು ಸಾಕುವವರಲ್ಲ ಎಂಬ ಸಲಹೆ ಬಂದಿತ್ತು. ಆದರೆ ಇಲ್ಲಿಯೇ ಮಾರುಕಟ್ಟೆಯನ್ನು ಟೆಸ್ಟ್ ಮಾಡಲು ನಾವು ಬಯಸಿದ್ದೆವು ಎಂದು ಆಶಿಷ್ ನಿರ್ಧರಿಸಿದ್ದರು.
ಕೆಲ ದಿನಗಳ ಬಳಿಕ ಜಸ್ಟ್ ಡಾಗ್ಸ್ ಬಿಸಿನೆಸ್ ಚುರುಕಾಯಿತು. ಇವತ್ತು ಗುಜರಾತ್‌ನ ಪ್ರತಿ ಪಟ್ಟಣದಲ್ಲೂ ಜಸ್ಟ್‌ಡಾಗ್ಸ್ ಸ್ಟೋರ್‌ಗಳು ಇವೆ. ಸಾಕು ನಾಯಿಗಳ ಆಹಾರ ಪೂರೈಕೆ ಹೈಪರ್ ಲೋಕಲ್ ಆಗಿರಬೇಕು. ಉತ್ತಮ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಹೊಂದಿರಬೇಕು. ಆರಂಭದಲ್ಲಿಯೇ ಈ ಎಲ್ಲ ಸೂಕ್ಷ್ಮಗಳನ್ನು ಮನಗಂಡು ಅದಕ್ಕೆ ತಕ್ಕಂತೆ ವಹಿವಾಟನ್ನು ವಿಸ್ತರಿಸಲಾಯಿತು ಎನ್ನುತ್ತಾರೆ ಅವರು. ಈ ವರ್ಷ ಜಸ್ಟ್‌ಡಾಗ್ಸ್, ಸಿಕ್ಸ್ತ್ ಸೆನ್ಸ್ ವೆಂಚರ್ಸ್‌ನಿಂದ 70 ಲಕ್ಷ ಡಾಲರ್ (ಅಂದಾಜು 56 ಕೋಟಿ ರೂ.)
ಮಾರುಕಟ್ಟೆ ಸಂಶೋಧಕ ಸಂಸ್ಥೆ ಮಾರ್ಕೆಟ್ ಡಿಸಿಫೆರ್ ಪ್ರಕಾರ, ಸಾಕುಪ್ರಾಣಿಗಳ ಪೋಷಣೆ ಉತ್ಪ್ನನಗಳ ಮಾರುಕಟ್ಟೆ ಮೌಲ್ಯ 2021ರಲ್ಲಿ 74,000 ಕೋಟಿ ರೂ. ಇತ್ತು. 2032ರ ವೇಳೆಗೆ 210,000 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.
ದೇಶದಲ್ಲಿ ಹೆಚ್ಚುತ್ತಿರುವ ನಗರೀಕರಣ, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಳ, ಕುಟುಂಬಗಳ ಆದಾಯ ಹೆಚ್ಚಳ, ಬದಲಾಗುತ್ತಿರುವ ಜೀವನ ಶೈಲಿಯ ಪರಿಣಾಮ ಪೆಟ್ ಕೇರ್ ಬಿಸಿನೆಸ್‌ಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ. 2025ರ ವೇಳೆಗೆ ದೇಶಾದ್ಯಂತ 150 ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಜಸ್ಟ್ ಡಾಗ್ಸ್ ಹೊಂದಿದೆ ಎನ್ನುತ್ತಾರೆ ಆಶಿಷ್.