Site icon Vistara News

Foreign Trade Policy 2023 : ವಿದೇಶಗಳ ಜತೆ ವ್ಯಾಪಾರದಲ್ಲಿ ಡಾಲರ್‌ ಬದಲು ರೂಪಾಯಿಗೆ ಆದ್ಯತೆ ನೀಡಿದ ಹೊಸ ನೀತಿ

export

ನವ ದೆಹಲಿ: ಭಾರತ ಶುಕ್ರವಾರ ತನ್ನ ವಿದೇಶಾಂಗ ವ್ಯಾಪಾರ ನೀತಿಯನ್ನು (Foreign Trade Policy 2023) ಪ್ರಕಟಿಸಿದ್ದು, 5 ವರ್ಷಗಳ ಸೀಮಿತ ಅವಧಿಯ ಬದಲು ದೀರ್ಘಕಾಲೀನ ದೃಷ್ಟಿಗೆ ಆದ್ಯತೆ ನೀಡಿದೆ. ವಿದೇಶಗಳ ಜತೆಗೆ ವ್ಯಾಪಾರದಲ್ಲಿ ಡಾಲರ್‌ ಬದಲಿಗೆ ರೂಪಾಯಿ ಬಳಕೆಗೆ ಉತ್ತೇಜಿಸಲಾಗಿದೆ. ಇದುವರೆಗೆ ವಿದೇಶಾಂಗ ವ್ಯಾಪಾರ ನೀತಿಯ ಅವಧಿ ಐದು ವರ್ಷಗಳಿಗೆ ಮುಕ್ತಾಯವಾಗುತ್ತಿತ್ತು. ಇದೀಗ ಮುಕ್ತಾಯದ ದಿನ ಇರುವುದಿಲ್ಲ. ಆದರೆ ಕಾಲಾನುಸಾರ ಪರಿಷ್ಕರಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೊಸ ವಿದೇಶಾಂಗ ನೀತಿಯು ಡೈನಾಮಿಕ್‌ ಆಗಿದ್ದು, ಅದಕ್ಕೆ ಕೊನೆಯ ದಿನಾಂಕ ಇರುವುದಿಲ್ಲ. ನಾವು ಪ್ರತಿಕ್ರಿಯೆ, ಸಲಹೆಗಳನ್ನು ಅಧರಿಸಿ ದಾಖಲೆಗಳನ್ನು ಪರಿಷ್ಕರಿಸುತ್ತೇವೆ. ಯಾವುದಾದರೂ ಕ್ಷೇತ್ರವು ತನಗೆ ನೀತಿಯಲ್ಲಿ ಆದ್ಯತೆ ಇಲ್ಲ ಎಂದು ಭಾವಿಸಿದರೆ ನಿರಾಸೆಪಡಬೇಕಿಲ್ಲ ಎಂದು ವಿದೇಶಾಂಗ ವ್ಯಾಪಾರ ನೀತಿಯ ಪ್ರಧಾನ ನಿರ್ದೇಶಕ ಸಂತೋಷ್‌ ಸಾರಂಗಿ ತಿಳಿಸಿದರು.

ನೂತನ ವಿದೇಶಾಂಗ ವ್ಯಾಪಾರ ನೀತಿಯ ಮುಖ್ಯಾಂಶ:

2030ರ ವೇಳೆಗೆ 2 ಲಕ್ಷ ಕೋಟಿ ಡಾಲರ್‌ (164 ಲಕ್ಷ ಕೋಟಿ ರೂ.) ರಫ್ತು ನಡೆಸುವ ಗುರಿಯನ್ನು ಭಾರತ ಹೊಂದಿದೆ.

ವಿದೇಶಾಂಗ ವ್ಯಾಪಾರ ನೀತಿಗೆ ಕೊನೆಯ ದಿನಾಂಕ ಇರುವುದಿಲ್ಲ, ಕಾಲಾನುಸಾರ ಪರಿಷ್ಕರಣೆ ಇರುತ್ತದೆ.

ಭಾರತವು ಕರೆನ್ಸಿ ಬಿಕ್ಕಟ್ಟು ಅಥವಾ ಡಾಲರ್‌ ಕೊರತೆ ಎದುರಿಸುತ್ತಿರುವ ದೇಶಗಳ ಜತೆಗೆ ರೂಪಾಯಿ ಮೂಲಕ ವಹಿವಾಟು ನಡೆಸಲು ಸಿದ್ಧವಿರುವುದಾಗಿ ಘೋಷಿಸಿದೆ.

2022-23ರಲ್ಲಿ ಭಾರತವು 765 ಶತಕೋಟಿ ಡಾಲರ್‌ (62 ಲಕ್ಷ ಕೋಟಿ ರೂ.) ಮೌಲ್ಯದ ರಫ್ತು ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ.

ಫರೀದಾಬಾದ್‌, ಮೊರಾದಾಬಾದ್‌, ಮಿರ್ಜಾಪುರ ಮತ್ತು ವಾರಾಣಸಿಯನ್ನು ರಫ್ತು ಕೇಂದ್ರವಾಗಿ ಘೋಷಿಸಲಾಗಿದೆ.

ಕೊರಿಯರ್‌ ಮೂಲಕ ರಫ್ತಿಗೆ ಮೌಲ್ಯವನ್ನು ಪ್ರತಿ ಯುನಿಟ್‌ಗೆ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ.

ಸರಾಸರಿ ರಫ್ತು ಬದ್ಧತೆಯ ವ್ಯಾಪ್ತಿಯಿಂದ ಡೇರಿ ವಲಯವನ್ನು ಮುಕ್ತಗೊಳಿಸಲಾಗಿದೆ.

ಇ-ಕಾಮರ್ಸ್‌ ವ್ಯಾಪಾರವನ್ನು 2023 ವೇಳೆಗೆ 300 ಶತಕೋಟಿ ಡಾಲರ್‌ಗೆ ( 24 ಲಕ್ಷ ಕೋಟಿ ರೂ.) ಏರಿಸುವ ಗುರಿ.

ರಫ್ತು ಬಾಧ್ಯತೆಯನ್ನು ಪಾಲಿಸುವಲ್ಲಿ ವಿಫಲರಾದವರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ನೀತಿ.

Exit mobile version