ನವ ದೆಹಲಿ: ಮುಂಬರುವ ದಿನಗಳಲ್ಲಿ ಆಧಾರ್ ಕಾರ್ಡ್‌ದಾರರು ಮೃತಪಟ್ಟಾಗ, ಅವರ ಕಾರ್ಡ್ ಭವಿಷ್ಯ ಕೂಡ ನಿಷ್ಕ್ರಿಯವಾಗಲಿದೆ. (deactivation) ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (Unique Identifiacation Authority of India) ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಶೀಘ್ರದಲ್ಲಿಯೇ ಈ ಸಂಬಂಧ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರಲಿದೆ. ಸಂಬಂಧಪಟ್ಟ ಇಲಾಖೆ ಮರಣಪತ್ರ ನೀಡಿದ ಬಳಿಕ, ಕುಟುಂಬದ ಸದಸ್ಯರ ಸಮ್ಮತಿ ಪಡೆದು ಆಧಾರ್ ಕಾರ್ಡ್ ಸಂಖ್ಯೆಯನ್ನೂ ನಿಷ್ಕ್ರಿಯಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದುವರೆಗೆ ಕಾರ್ಡ್‌ದಾರ ಮೃತಪಟ್ಟಾಗ ಆತನ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುವ ಅಥವಾ ರದ್ದುಪಡಿಸುವ ಯಾವುದೇ ಆಯ್ಕೆ ಇದ್ದಿರಲಿಲ್ಲ.
ಈ ಬಗ್ಗೆ ರಾಜ್ಯ ಸರ್ಕಾರಗಳ ಜತೆಗೆ ಕೂಡ ಪ್ರಾಧಿಕಾರವು ಸಮಾಲೋಚನೆ ನಡೆಸುತ್ತಿದೆ. ಜನನ ಪ್ರಮಾಣಪತ್ರ ನೀಡುವಾಗಲೇ ಆಧಾರ್ ಕಾರ್ಡ್ ಕೊಡುವ ಬಗ್ಗೆ ಯೋಜನೆಯನ್ನು ಯುಐಡಿಎಐ ಜಾರಿಗೊಳಿಸಿರುವ ಸಂದರ್ಭ ಈ ಪ್ರಸ್ತಾಪವೂ ಆಗಿದೆ. 20 ರಾಜ್ಯಗಳು ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಿವೆ. ಇತರ ರಾಜ್ಯಗಳೂ ಅನುಸರಿಸುವ ಸಾಧ್ಯತೆ ಇದೆ.
ಹೊಸ ಪ್ರಸ್ತಾಪದ ಪ್ರಕಾರ ಮರಣ ಪತ್ರ (death certificate) ಪಡೆಯುವ ಸಂದರ್ಭ ಕುಟುಂಬದ ಸದಸ್ಯರು ಆಧಾರ್ ಸಂಖ್ಯೆಯನ್ನೂ ನೀಡಬೇಕಾಗುತ್ತದೆ. ಆಧಾರ್ 2.0 ಉಪಕ್ರಮದ ಭಾಗವಾಗಿ ಹಲವು ಸುಧಾರಣೆಯ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. 10 ವರ್ಷ ಹಿಂದೆ ಆಧಾರ್ ಕಾರ್ಡ್ ಮಾಡಿಸಿದವರು ತಮ್ಮ ದಾಖಲಾತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದುದವರೆಗೆ ಮೂರು ಕೋಟಿಗೂ ಹೆಚ್ಚು ಕಾರ್ಡ್‌ದಾರರು ತಮ್ಮ ಆಧಾರ್ ದಾಖಲಾತಿಗಳನ್ನು ಪರಿಷ್ಕರಿಸಿದ್ದಾರೆ. ಆರೋಗ್ಯ ದಾಖಲಾತಿಗಖು, ಆದಾಯ ತೆರಿಗೆ, ವಾಹನ ಚಾಲನೆಯ ಪರವಾನಗಿಗೆ ಆಧಾರ್ ಬಳಕೆಯಲ್ಲಿದೆ. 2009ರಲ್ಲಿ 12 ಅಂಕಿಗಳ ಆಧಾರ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗಿತ್ತು.