Site icon Vistara News

Aadhaar-PAN: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆಗೆ ಇನ್ಮುಂದೆ ಆಧಾರ್​-ಪ್ಯಾನ್​ ಕಡ್ಡಾಯ; ಏನಿದೆ ಹೊಸ ನಿಯಮದಲ್ಲಿ?

Aadhaar and PAN

#image_title

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್​ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ -ಸಾರ್ವಜನಿಕ ಭವಿಷ್ಯ ನಿಧಿ​), ಸುಕನ್ಯಾ ಸಮೃದ್ಧಿ ಯೋಜನೆ (SSY), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಇನ್ನಿತರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇನ್ನು ಮುಂದೆ ಆಧಾರ್​ ಮತ್ತು ಪ್ಯಾನ್​ ನಂಬರ್​​ಗಳು (Aadhaar-PAN) ಕಡ್ಡಾಯ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾರ್ಚ್​ 31ರಂದು ಅಧಿಸೂಚನೆ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯ ಕೆವೈಸಿ ನಿಯಮಗಳಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರ ಒಂದು ಭಾಗವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ.

ಈ ಹಿಂದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್​ ನಂಬರ್​ ಬೇಕಿತ್ತಾದರೂ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಕೇಂದ್ರ ಹಣಕಾಸು ಸಚಿವಾಲಯದ ಹೊಸ ಅಧಿಸೂಚನೆ ಅನ್ವಯ, ಸರ್ಕಾರಿ ಬೆಂಬಲಿತವಾದ ಎಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂದರೆ, ಅವರು ತಮ್ಮ ಆಧಾರ್ ನಂಬರ್ ಕೊಡಲೇಬೇಕಾಗುತ್ತದೆ. ಅದರಲ್ಲೂ ಈ ಯೋಜನೆಗಳಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಮಿತಿಗಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಲು ಇಚ್ಛಿಸುವವರು ಪ್ಯಾನ್​ ಕಾರ್ಡ್​ ನಂಬರ್​ನ್ನೂ ಕೂಡ ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಏನಿದು ಹೊಸ ನಿಯಮ?

1. ಪಿಪಿಎಫ್​, ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಉಳಿತಾಯ ಸೇರಿ ಇಂಥ ಯಾವುದಾದರೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿರುವವರು, ನೀವು ಸಣ್ಣ ಉಳಿತಾಯ ಯೋಜನೆಯಲ್ಲಿ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ನಂಬರ್​ ಕೊಟ್ಟಿದ್ದೀರಾ? ಇಲ್ಲವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಹಾಗೊಮ್ಮೆ ನೀವು ಹೂಡಿಕೆ ಮಾಡುವಾಗ ಆಧಾರ್ ನಂಬರ್ ಕೊಟ್ಟಿಲ್ಲದೆ ಇದ್ದಲ್ಲಿ, 2023ರ ಸೆಪ್ಟೆಂಬರ್​ 30ರೊಳಗೆ ನೀವು ಆಧಾರ್ ನಂಬರ್​ ನೀಡಬೇಕು. ಅಂದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದ್ದೀರೋ, ಅಲ್ಲಿಗೆ ಆಧಾರ್​ ಒದಗಿಸಬೇಕು. ಅದಿಲ್ಲದೆ ಇದ್ದರೆ ನಿಮ್ಮ ಹೂಡಿಕೆಯ ಖಾತೆಯನ್ನು ಅಕ್ಟೋಬರ್​ 1 ರಿಂದ ಸ್ಥಗಿತಗೊಳಿಸಲಾಗುತ್ತದೆ. ನೀವು ಆಧಾರ್ ನಂಬರ್ ಕೊಡುವವರೆಗೂ ಅದು ಮತ್ತೆ ಚಾಲ್ತಿ ರೂಪಕ್ಕೆ ಬರುವುದಿಲ್ಲ.

2. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗೆ ಪ್ಯಾನ್​ ಮತ್ತು ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಇಂದಿನಿಂದಲೇ ಅಂದರೆ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತದೆ. ಇಂದಿನ ನಂತರ ಯಾರಾದರೂ, ಯಾವುದೇ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಅಕೌಂಟ್​ ತೆರೆಯುತ್ತೀರಿ ಎಂದಾದರೆ ಕಡ್ಡಾಯವಾಗಿ ಆಧಾರ್ ನಂಬರ್ ಕೊಡಲೇಬೇಕು. ಹಾಗೊಮ್ಮೆ, ಈಗ ನನ್ನ ಬಳಿ ಆಧಾರ್​ ನಂಬರ್ ಇಲ್ಲ. ಅದನ್ನು ಕೊಡದೆ ಅಕೌಂಟ್​ ತೆರೆಯುತ್ತೇನೆ ಎಂದರೆ ನಿಮಗೆ ಆ ಅವಕಾಶವೂ ಇದೆ. ಆದರೆ ನೀವು ಆರು ತಿಂಗಳ ಒಳೆಗೆ ಆಧಾರ್​ ನಂಬರ್ ಕೊಡಲೇಬೇಕು. ಯಾವ ದಿನಾಂಕದಂದು ನೀವು ಹೂಡಿಕೆ ಖಾತೆ ತೆರೆಯುತ್ತೀರೋ, ಆ ದಿನದಿಂದ ಪ್ರಾರಂಭವಾಗಿ 6 ತಿಂಗಳ ಒಳಗೆ ಆಧಾರ್​ ನಂಬರ್​ ಕೊಡದೆ ಇದ್ದರೆ, ಖಾತೆ ತಡೆ ಹಿಡಿಯಲ್ಪಡುತ್ತದೆ.

ಪ್ಯಾನ್​ ಕಾರ್ಡ್​ ನಿಯಮವೇನು?
ಇನ್ನುಮುಂದೆ ಯಾವುದೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡುವುದಿದ್ದರೆ ಪ್ಯಾನ್​ ಕಾರ್ಡ್ ನಂಬರ್​ ಕೂಡ ಕಡ್ಡಾಯವಾಗಲಿದೆ.

ಅದರಲ್ಲಿ ಈಗಾಗಲೇ ಯಾವುದಾದರೂ ಒಂದು ಹೂಡಿಕೆ ಖಾತೆಯನ್ನು ನೀವು ಹೊಂದಿದ್ದು, 1) ಆ ಖಾತೆಯಲ್ಲಿ 50 ಸಾವಿರ ರೂ. ಹೆಚ್ಚು ಹಣ ಇದ್ದರೆ 2) ಯಾವುದೇ ಹಣಕಾಸು ವರ್ಷದಲ್ಲಿ ನಿಮ್ಮ ಹೂಡಿಕೆ ಅಕೌಂಟ್​​ಗೆ 1 ಲಕ್ಷ ರೂ.ಗೂ ಹೆಚ್ಚು ಹಣ ಕ್ರೆಡಿಟ್ ಆಗಿದ್ದರೆ ಮತ್ತು 3) ನಿಮ್ಮ ಹೂಡಿಕೆ ಖಾತೆಯಿಂದ ಒಂದು ತಿಂಗಳಲ್ಲಿ 10 ಸಾವಿರ ರೂ.ಗೂ ಹೆಚ್ಚಿನ ಹಣ ವಹಿವಾಟು ಆಗುತ್ತಿದ್ದರೆ (ಹಣ ಹಿಂಪಡೆಯುವಿಕೆ ಮತ್ತು ವರ್ಗಾವಣೆ)- ಅಂಥವರು ಇನ್ನು 2 ತಿಂಗಳಲ್ಲಿ ನಿಮ್ಮ ಖಾತೆ ಇರುವಲ್ಲಿ ಪ್ಯಾನ್ ಕಾರ್ಡ್ ನಂಬರ್ ಒದಗಿಸಬೇಕು. ಹಾಗೊಮ್ಮೆ ಪ್ಯಾನ್ ನಂಬರ್ ಕೊಡದೆ ಇದ್ದಲ್ಲಿ, ಖಾತೆ ಸ್ಥಗಿತಗೊಳ್ಳುತ್ತದೆ. ಪುನಃ ನಂಬರ್ ನೀಡಿದ ಬಳಿಕವಷ್ಟೇ ಖಾತೆ ಚಾಲ್ತಿಗೆ ಬರುತ್ತದೆ.

    Exit mobile version