Site icon Vistara News

Aadhaar : ಖಾಸಗಿ ಸಂಸ್ಥೆಗಳಿಗೆ ಆಧಾರ್‌ ದೃಢೀಕರಣಕ್ಕೆ ಅನುಮತಿ ನೀಡಲು ಪ್ರಸ್ತಾಪ

aadhaar

ನವ ದೆಹಲಿ: ಮಾಹಿತಿ ತಂತ್ರಜ್ಞಾನ ಸಚಿವಾಲಯವು ಖಾಸಗಿ ಸಂಸ್ಥೆಗಳಿಗೂ ಆಧಾರ್‌ ದೃಢೀಕರಣಕ್ಕೆ ( Aadhaar authentication ) ಅನುಮತಿ ನೀಡಲು ಹೊಸ ಪ್ರಸ್ತಾಪ ಮುಂದಿಟ್ಟಿದೆ. (Aadhaar) ಇದರಿಂದಾಗಿ ಖಾಸಗಿ ಸಂಸ್ಥೆಗಳೂ ನಾನಾ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಆಧಾರ್‌ ಅನ್ನು ಬಳಸಬಹುದು. ಇದು ಜನಜೀವನದ ಗುಣಮಟ್ಟ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗ ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಮಾತ್ರ ಆಧಾರ್‌ ದೃಢೀಕರಣವನ್ನು ಮಾಡಲು ಅನುಮತಿ ಇದೆ. ಸಾರ್ವಜನಿಕ ನಿಧಿಯ ಸೋರಿಕೆ ಆಗದಂತೆ ತಡೆಯುವಲ್ಲಿ ಇದು ಸಹಕಾರಿಯಾಗಿದೆ. ಇದೀಗ ಖಾಸಗಿ ವಲಯದ ಸಂಸ್ಥೆಗಳೂ ಆಧಾರ್‌ ದೃಢೀಕರಣ ಪಡೆದುಕೊಳ್ಳಲು ಪ್ರಸ್ತಾಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಐಟಿ ಸಚಿವಾಲಯವು ತನ್ನ ವೆಬ್‌ ಸೈಟ್‌ನಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರಿಂದ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸ್ವೀಕರಿಸಲಿದೆ.‌

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್​ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ -ಸಾರ್ವಜನಿಕ ಭವಿಷ್ಯ ನಿಧಿ​), ಸುಕನ್ಯಾ ಸಮೃದ್ಧಿ ಯೋಜನೆ (SSY), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಇನ್ನಿತರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇನ್ನು ಮುಂದೆ ಆಧಾರ್​ ಮತ್ತು ಪ್ಯಾನ್​ ನಂಬರ್​​ಗಳು (Aadhaar-PAN) ಕಡ್ಡಾಯ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾರ್ಚ್​ 31ರಂದು ಅಧಿಸೂಚನೆ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯ ಕೆವೈಸಿ ನಿಯಮಗಳಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದರ ಒಂದು ಭಾಗವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ.

ಈ ಹಿಂದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್​ ನಂಬರ್​ ಬೇಕಿತ್ತಾದರೂ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಕೇಂದ್ರ ಹಣಕಾಸು ಸಚಿವಾಲಯದ ಹೊಸ ಅಧಿಸೂಚನೆ ಅನ್ವಯ, ಸರ್ಕಾರಿ ಬೆಂಬಲಿತವಾದ ಎಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂದರೆ, ಅವರು ತಮ್ಮ ಆಧಾರ್ ನಂಬರ್ ಕೊಡಲೇಬೇಕಾಗುತ್ತದೆ. ಅದರಲ್ಲೂ ಈ ಯೋಜನೆಗಳಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಮಿತಿಗಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಲು ಇಚ್ಛಿಸುವವರು ಪ್ಯಾನ್​ ಕಾರ್ಡ್​ ನಂಬರ್​ನ್ನೂ ಕೂಡ ಕಡ್ಡಾಯವಾಗಿ ನೀಡಬೇಕಾಗುತ್ತದೆ.

Exit mobile version