ನವ ದೆಹಲಿ: ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಅದಾನಿ ಡೇಟಾ ನೆಟ್‌ವರ್ಕ್ಸ್, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮುಂಬರುವ ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಬಿಡ್ ಸಲ್ಲಿಸಿವೆ. ದೂರಸಂಪರ್ಕ ಇಲಾಖೆ ಮಂಗಳವಾರ ಪಟ್ಟಿ ಬಿಡುಗಡೆಗೊಳಿಸಿದೆ.
ಜುಲೈ ೨೬ರಿಂದ ಸ್ಪೆಕ್ಟ್ರಮ್ ಹರಾಜು ಆರಂಭವಾಗಲಿದೆ. ಅದಾನಿ ಡೇಟಾ ನೆಟ್ ವರ್ಕ್ಸ್ ಪ್ರವೇಶದಿಂದಾಗಿ ಹಾಗೂ ಈಗಾಗಲೇ ಪ್ರಮುಖ ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ನಿಂದ ಹರಾಜಿನ ಕಣದಲ್ಲಿ ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಜುಲೈ ೧೯ರ ತನಕ ಕಾಲಾವಕಾಶ ಇದೆ. ಒಟ್ಟು ೪.೩ ಲಕ್ಷ ಕೋಟಿ ರೂ. ಮೌಲ್ಯದ ೭೨,೦೯೭.೮೫ ಮೆಗಾ ಹರ್ಟ್ಸ್ ಸ್ಪೆಕ್ಟ್ರಮ್‌ಗಳನ್ನು ಹರಾಜು ಹಾಕಲಾಗುತ್ತಿದೆ.
ಅದಾನಿ ಗ್ರೂಪ್ ತನ್ನ ಹೊಸ ಕಂಪನಿಯಾದ ಅದಾನಿ ಡೇಟಾ ನೆಟ್‌ವರ್ಕ್ಸ್ ಲಿಮಿಟೆಡ್ ಮೂಲಕ ೫ಜಿ ಹರಾಜಿನ ಕಣಕ್ಕಿಳಿದಿದೆ. ಇದರ ನಿವ್ವಳ ಮೌಲ್ಯ ೨೪೮ ಕೋಟಿ ರೂ.ಗಳಾಗಿದೆ. ಅದಾನಿ ಡೇಟಾ ನೆಟ್ ವರ್ಕ್ಸ್ ಗುಜರಾತ್ ವೃತ್ತಕ್ಕೆ ಅನ್ವಯಿಸುವಂತೆ ಯುನಿಫೈಡ್ ಲೈಸೆನ್ಸ್ ಅನ್ನು ದೂರಸಂಪರ್ಕ ಇಲಾಖೆಯಿಂದ ಪಡೆದಿದೆ. ಇತರ ರಾಜ್ಯಗಳಲ್ಲಿ ಸೇವೆ ವಿಸ್ತರಿಸಲು ಇತರ ವೃತ್ತಗಳಲ್ಲಿ ಪ್ರತ್ಯೇಕ ಲೈಸೆನ್ಸ್ ಪಡೆಯಲಿದೆ. ಸದ್ಯಕ್ಕೆ ಖಾಸಗಿ ಬಳಕೆಗೆ ಮಾತ್ರ ೫ಜಿ ಸ್ಪೆಕ್ಟ್ರಮ್ ಖರೀದಿಸಲು ಅದಾನಿ ಗ್ರೂಪ್ ಮುಂದಾಗಿದೆ. ಅಂದರೆ ಏರ್‌ಪೋರ್ಟ್‌ನಿಂದ ವಿದ್ಯುತ್ ವಲಯದ ತನಕ ಇರುವ ತನ್ನ ಉದ್ದಿಮೆಗೆ ಖಾಸಗಿ ನೆಟ್‌ವರ್ಕ್ ಸ್ಥಾಪಿಸಲು ಸ್ಪೆಕ್ಟ್ರಮ್ ಅನ್ನು ಬಳಸಲಿದೆ. ಭವಿಷ್ಯದಲ್ಲಿ ವಾಣಿಜ್ಯೋದ್ದೇಶದ ವಹಿವಾಟಿಗೆ ಮುಂದಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.