ಮುಂಬಯಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿಯವರು ಎಸಿಸಿ ಮತ್ತು ಅಂಬುಜಾ ಸಿಮೆಂಟ್ ಕಂಪನಿಗಳನ್ನು ಖರೀದಿಸಿದ್ದಾರೆ. ಸ್ವಿಜರ್ಲೆಂಡ್ ಮೂಲದ ಹೊಲ್ಸಿಮ್ ಗ್ರೂಪ್‌ನಿಂದ 10.5 ಶತಕೋಟಿ ಡಾಲರ್‌ಗಳ ಬೃಹತ್ ಮೊತ್ತಕ್ಕೆ (80,000 ಕೋಟಿ ರೂ.) ಅಂಬುಜಾ ಸಿಮೆಂಟ್ ಮತ್ತು ಎಸಿಸಿಯನ್ನು ಖರೀದಿಸಿದ್ದಾರೆ.
- 80,000 ಕೋಟಿ ರೂ.ಗಳ ಮೆಗಾ ಡೀಲ್
- ಅದಾನಿ ಸಮೂಹ ಈಗ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ
ಇದರೊಂದಿಗೆ ಅದಾನಿ ಸಮೂಹ ಭಾರತದ ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕನಾಗಿ ಹೊರಹೊಮ್ಮಿದೆ. ವಾರ್ಷಿಕ 6.6ಕೋಟಿ ಟನ್ ಸಿಮೆಂಟ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಉಭಯ ಕಂಪನಿಗಳು ಹೊಂದಿವೆ. ಅದಾನಿ ಸಮೂಹದ ಅತಿ ದೊಡ್ಡ ಸ್ವಾಧೀನ ಪ್ರಕ್ರಿಯೆ ಇದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ ಎರಡೂ ಸಿಮೆಂಟ್ ಕಂಪನಿಗಳಲ್ಲಿ ಹೊಲ್ಸಿಮ್ ಹೊಂದಿದ್ದ ಎಲ್ಲ ಷೇರುಗಳನ್ನು ಅದಾನಿ ಸಮೂಹ ಖರೀದಿಸಿದೆ. ಹೊಲ್ಸಿಮ್ ಅಂಬುಜಾ ಸಿಮೆಂಟ್ ನಲ್ಲಿ ಶೇ. 63.19ಮತ್ತು ಎಸಿಸಿಯಲ್ಲಿ ಶೇ.54.53 ಷೇರುಗಳನ್ನು ಹೊಂದಿತ್ತು.
” ಸಿಮೆಂಟ್ ಉದ್ದಿಮೆಗೆ ಪ್ರವೇಶಿಸಿರುವ ಅದಾನಿ ಸಮೂಹವು ಭಾರತದ ಭವಿಷ್ಯದ ಬೆಳವಣಿಗೆ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿದೆ. ಭಾರತವು ಹಲವಾರು ದಶಕಗಳ ಕಾಲ ಅತಿ ಹೆಚ್ಚು ಬೇಡಿಕೆಯ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ವಿಶ್ವದ ಎರಡನೇ ಅತಿ ದೊಡ್ಡ ಸಿಮೆಂಟ್ ಮಾರುಕಟ್ಟೆಯಾಗಿಯೂ ಮುಂದುವರಿಯಲಿದೆ. ಹೀಗಿದ್ದರೂ ತಲಾ ಸಿಮೆಂಟ್ ಬಳಕೆ ಇಲ್ಲಿ ಕಡಿಮೆ. ಆದ್ದರಿಂದ ಅಂಬುಜಾ ಮತ್ತು ಎಸಿಸಿ ಮೂಲಕ ಉತ್ಪಾದನೆ ಮತ್ತು ಬಳಕೆಗೆ ವಿಫುಲ ಅವಕಾಶಗಳಿವೆʼʼ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಭಾರತದಲ್ಲಿ ತಲಾ ಸಿಮೆಂಟ್ ಬಳಕೆ ಕೇವಲ 242 ಕೆ.ಜಿ. ಆದರೆ ಜಾಗತಿಕ ಸರಾಸರಿ ತಲಾ 525 ಕೆ.ಜಿ ಆಗಿದೆ.
ಈ ಎರಡೂ ಸಿಮೆಂಟ್ ಕಂಪನಿಗಳನ್ನು ಖರೀದಿಸುವ ರೇಸ್‌ನಲ್ಲಿ ಸಜ್ಜನ್ ಜಿಂದಾಲ್ ನೇತೃತ್ವದ ಜೆಎಸ್ ಡಬ್ಲ್ಯು ಸಿಮೆಂಟ್ ಮತ್ತು ಇತರ ಸ್ಪರ್ಧಿಗಳನ್ನು ಅದಾನಿ ಗ್ರೂಪ್ ಹಿಂದಿಕ್ಕಿದೆ. ಈ ಡೀಲ್‌ನಲ್ಲಿ ಅದಾನಿ ಸಮೂಹಕ್ಕೆ ಬಾರ್‌ಕ್ಲೇಸ್, ಡ್ಯೂಯಿಷ್ ಬ್ಯಾಂಕ್, ಸ್ಟ್ಯಾಂಡಡ್ ಚಾರ್ಟರ್ಡ್ ಬ್ಯಾಂಕ್ ಹಣಕಾಸು ನೆರವು ನೀಡುತ್ತಿವೆ.
ಸ್ವಿಜರ್ಲೆಂಡ್ ಮೂಲದ ಹೊಲ್ಸಿಮ್, ಜಾಗತಿಕ ಮಟ್ಟದಲ್ಲಿ ಫ್ರಾನ್ಸ್ ಮೂಲದ ಲಾಫ್ರಾಗ್ ಜತೆ 2015ರಲ್ಲಿ ವಿಲೀನವಾಗಿತ್ತು. ಹೊಲ್ಸಿಮ್ ಗ್ರೂಪ್ ಆಗಿ ರಿಬ್ರ್ಯಾಂಡ್ ಆಗಿದೆ. ಜತೆಗೆ ಯುರೋಪ್ ಮತ್ತು ಏಷ್ಯಾದಲ್ಲಿ ಹಲವು ಹೂಡಿಕೆಗಳನ್ನು ಹಿಂತೆಗೆದುಕೊಂಡು ಪುನಾರಚಿಸುತ್ತಿದೆ. ಇದರಲ್ಲಿ ಕಂಪನಿಯ ಭಾರತದ ಆಸ್ತಿಗಳೂ ಸೇರಿತ್ತು.
ಭಾರತದಲ್ಲಿ ಸಿಮೆಂಟ್‌ಗೆ ಭಾರಿ ಬೇಡಿಕೆ ಇದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಸಾಕಾಗುತ್ತಿಲ್ಲ. ಆದರಿಂದ ಈ ಅಂತರವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅದಾನಿ ವಿವರಿಸಿದ್ದಾರೆ.
ಭಾರತದಲ್ಲಿ ಮಧ್ಯಮ ವರ್ಗದ ಆದಾಯವಿರುವ ಜನಸಂಖ್ಯೆ ಹೆಚ್ಚುತ್ತಿದ್ದು, ಸಿಮೆಂಟ್ ಪೂರೈಕೆಯ ಅಗತ್ಯವೂ ವೃದ್ಧಿಸುತ್ತಿದೆ. ಚೀನಾದಲ್ಲಿ ತಲಾ ಸಿಮೆಂಟ್ ಬಳಕೆ ಸರಾಸರಿ 1,600 ಕೆ.ಜಿ ಆಗಿದೆ. ಇದನ್ನು ಹೋಲಿಸಿದರೆ ಭಾರತದಲ್ಲಿ ವಿಫುಲ ಮಾರುಕಟ್ಟೆ ಅವಕಾಶ ಇದೆ. 100 ಸ್ಮಾರ್ಟ್ ಸಿಟಿ ನಿರ್ಮಾಣ ಯೋಜನೆ, 200 ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಎಲ್ಲರಿಗೂ ವಸತಿ ಇತ್ಯಾದಿ ಯೋಜನೆಗಳಿಂದ ಸಿಮೆಂಟ್ ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಅದಾನಿ ವಿವರಿಸಿದ್ದಾರೆ.
ಅಂಬುಜಾ ಸಿಮೆಂಟ್ ಮತ್ತು ಎಸಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯ ಸಿಮೆಂಟ್ ಬ್ರ್ಯಾಂಡ್ ಗಳಾಗಿವೆ. ಇವುಗಳನ್ನು ಖರೀದಿಸುವುದು ನಮ್ಮ ಅದೃಷ್ಟ. ಮುಂದಿನ 5 ವರ್ಷಗಳಲ್ಲಿ ಅದಾನಿ ಸಮೂಹ ತನ್ನ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಇಮ್ಮಡಿಗೊಳಿಸಲಿದೆ. ಹಾಗೂ ಸಿಮೆಂಟ್ ಉತ್ಪಾದನೆಯನ್ನು ಪರಿಸರಸ್ನೇಹಿಯಾಗಿ ಮಾಡಲಾಗುವುದು ಎಂದರು. ಮುಂಬಯಿ ಮೂಲದ ಅಂಬುಜಾ ಸಿಮೆಂಟ್ 1983 ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿಯಾಗಿದ್ದು, 2006ರಲ್ಲಿ ಹೊಲ್ಸಿಮ್ ಇದರ ಷೇರುಗಳನ್ನು ಖರೀದಿಸಿತ್ತು. ಮುಂಬಯಿ ಮೂಲದ ಎಸಿಸಿ 1936ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, 2004ರಲ್ಲಿ ಹೊಲ್ಸಿಮ್ ಖರೀದಿಸಿತ್ತು.
ಭಾರತದ ಟಾಪ್ 5 ಸಿಮೆಂಟ್ ಕಂಪನಿಗಳು
1. ಅಲ್ಟ್ರಾ ಟೆಕ್
2. ಅದಾನಿ ಗ್ರೂಪ್- ಅಂಬುಜಾ -ಎಸಿಸಿ
3. ಶ್ರೀ ಸಿಮೆಂಟ್
4. ದಾಲ್ಮಿಯಾ ಸಿಮೆಂಟ್
5. ನುವಾಕೊ ಸಿಮೆಂಟ್