ನವ ದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಮತ್ತು ಕುಟುಂಬವು 8,900 ಕೋಟಿ ರೂ. (ಸುಮಾರು 1.11 ಶತಕೋಟಿ ಡಾಲರ್) ಸಾಲವನ್ನು ಅವಧಿಗೆ ಮುನ್ನವೇ ಮರು ಪಾವತಿಸಲು ನಿರ್ಧರಿಸಿದೆ. ಅದಾನಿಯವರು ಸಾಲವನ್ನು ಅವಧಿಗೆ ಮುನ್ನ ತೀರಿಸುವುದರಿಂದ ಅಡಮಾನವಿಟ್ಟಿರುವ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಾಧ್ಯವಾಗುತ್ತದೆ. ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಪೋರ್ಟ್ಸ್, ಅದಾನಿ ಗ್ರೀನ್ ಎನರ್ಜಿಯ ಲಕ್ಷಾಂತರ ಷೇರುಗಳನ್ನು ಅದಾನಿ ಗ್ರೂಪ್, ಬಿಡುಗಡೆಗೊಳಿಸಲು ಇದರಿಂದ ಹಾದಿ ಸುಗಮವಾಗಲಿದೆ.
ಅದಾನಿ ಟ್ರಾನ್ಸ್‌ಮಿಶನ್ ಲಿಮಿಟೆಡ್‌ನ 1.17 ಕೋಟಿ , ಅದಾನಿ ಪೋರ್ಟ್ಸ್‌ನ ೧೬.೮ ಕೋಟಿ, ಅದಾನಿ ಗ್ರೀನ್ ಎನರ್ಜಿಯ 2.75 ಕೋಟಿ ಷೇರುಗಳನ್ನು ಬಿಡುಗಡೆಗೊಳಿಸಲು ಇದರಿಂದ ಸುಲಭವಾಗಲಿದೆ. ಅದಾನಿಯವರು ಈ ಮೂಲಕ ಷೇರು ಹೂಡಿಕೆದಾರರಲ್ಲಿ ಸಮೂಹದ ಆರ್ಥಿಕ ಆರೋಗ್ಯದ ಬಗ್ಗೆ ವಿಶ್ವಾಸ ಮೂಡಿಸಲು ಯತ್ನಿಸುತ್ತಿದ್ದಾರೆ.
ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಅದಾನಿ ಕಂಪನಿಗಳ ಷೇರು ದರಗಳಲ್ಲಿ ಭಾರಿ ಕುಸಿತ ಸಂಭವಿಸಿತ್ತು. ಅದಾನಿ ಸಮೂಹ ಸಾಲ ಮರು ಪಾವತಿಸುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಲು ಅದಾನಿಯವರು ಮುಂದಾಗಿದ್ದಾರೆ.