ಅಹಮದಾಬಾದ್: ಮುಂದಿನ 2-3 ವರ್ಷಗಳಲ್ಲಿ 90,000 ಕೋಟಿ ರೂ. ತೆರಿಗೆ ಪೂರ್ವ ಲಾಭ ಗಳಿಸುವ ಗುರಿಯನ್ನು ಅದಾನಿ ಗ್ರೂಪ್ ಹೊಂದಿದೆ ಎಂದು ಕಂಪನಿ ಹೇಳಿಕೆ ನೀಡಿದೆ. ( Adani Group) ಏರ್‌ಪೋರ್ಟ್ಸ್, ಎನರ್ಜಿ, ಸಿಮೆಂಟ್, ನವೀಕರಿಸಬಹುದಾದ ಇಂಧನ, ಸಾರಿಗೆ, ಲಾಜಿಸ್ಟಿಕ್ಸ್, ವಿದ್ಯುತ್, ವಿದ್ಯುತ್ ವಿತರಣೆ ಉದ್ದಿಮೆ ವಲಯದಲ್ಲಿ ಲಾಭ ಗಳಿಕೆ ಸಾಧ್ಯವಾಗಲಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
ಅದಾನಿ ಸಮೂಹವು ಇತ್ತೀಚೆಗೆ 2.65 ಶತಕೋಟಿ ಡಾಲರ್ ಸಾಲವನ್ನು (ಅಂದಾಜು 21,730 ಕೋಟಿ ರೂ.) ಮರು ಪಾವತಿಸಿದೆ. ಇದು ಹಿಂಡೆನ್ ಬರ್ಗ್‌ನ ವರದಿಯ ಬಳಿಕ ಉಂಟಾಗಿರುವ ಷೇರು ಹೂಡಿಕೆದಾರರ ವಿಶ್ವಾಸನಷ್ಟವನ್ನು ಭರಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ.
ನವೀಕರಿಸಬಹುದಾದ ಇಂಧನ, ಸಾರಿಗೆ ಮತ್ತು ಬಂದರುಗಳು ಅದಾನಿ ಗ್ರೂಪ್‌ನ ಆದಾಯ ವೃದ್ಧಿಗೆ ಸಹಕರಿಸಲಿದೆ. ಮೂಲಸೌಕರ್ಯ ಉದ್ದಿಮೆಯು ಸಮೂಹದ ಪ್ರಮುಖ ಬಿಸಿನೆಸ್ ಆಗಿದೆ. ಇಂಧನ, ಸಾರಿಗೆ, ಲಾಜಿಸ್ಟಿಕ್ಸ್ ಇದರಲ್ಲಿದ್ದು, ಅದಾನಿ ಗ್ರೂಪ್ ಮುನ್ನಡೆಸುತ್ತಿದೆ. ಕಂಪನಿಗೆ ಕ್ಯಾಶ್ ಫ್ಲೋ ಆಗಲು ಇದು ಸಹಕರಿಸಿದೆ. ಸಾಲ ಮರು ಪಾವತಿಯ ವಿಚಾರದಲ್ಲಿ ಯಾವುದೇ ಸಮಸ್ಯೆ ಸದ್ಯಕ್ಕಿಲ್ಲ. ರಿಫೈನಾನ್ಸ್ ರಿಸ್ಕ್ ಕೂಡ ಇಲ್ಲ.
ಅದಾನಿ ಗ್ರೂಪ್‌ನ ನಿವ್ವಳ ಆಸ್ತಿ ಮೌಲ್ಯ 3,91,000 ಕೋಟಿ ರೂ.ಗಳಾಗಿದೆ. ಅದಾನಿ ಗ್ರೂಪ್ ತನ್ನ ಲಾಂಗ್ ಟರ್ಮ್ ಡೆಟ್ ಪೋರ್ಟ್‌ಫೋಲಿಯೊವನ್ನು ವೈವಿಧ್ಯಮಯಗೊಳಿಸಿದೆ. ಬ್ಯಾಂಕ್‌ಗಳಿಗೆ ತನ್ನ ಎಕ್ಸ್‌ಪೋಶರ್ ಅನ್ನು ಕಡಿಮೆ ಮಾಡಿದೆ. ಅದಾನಿ ಸಮೂಹದ ಬಹುತೇಕ ಸಾಲಗಳು ಬಾಂಡ್‌ಗಳು ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳಾಗಿವೆ.
ಇದನ್ನೂ ಓದಿ: Adani stocks : ಅದಾನಿ ಷೇರುದಾರರಿಗೆ ದಿಢೀರ್ 50,000 ಕೋಟಿ ರೂ. ನಷ್ಟ, ಕಾರಣವೇನು?
ಅದಾನಿ ಗ್ರೂಪ್ ಪಡೆದಿರುವ ಸಾಲಗಳಲ್ಲಿ ಭಾರತೀಯ ಸಾರ್ವಜನಿಕ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಪ್ರಮಾಣ ಸೀಮಿತ ಮಟ್ಟದಲ್ಲಿದೆ. ಅದಾನಿ ಸಮೂಹದ ನಿವ್ವಳ ಸಾಲ ಅನುಪಾತ ಕೂಡ ಇಳಿಕೆಯಾಗಿದೆ. ಅದಾನಿ ಗ್ರೂಪ್ ಪಡೆದಿರುವ ಒಟ್ಟು ಸಾಲದಲ್ಲಿ ಬಾಂಡ್‌ಗಳ ಪಾಲು 39% ಆಗಿದೆ. ವಿದೇಶಿ ಬ್ಯಾಂಕ್‌ಗಳ ಪಾಲು 29% ಆಗಿದೆ. ಪಿಎಸ್‌ಯು ಮತ್ತು ಖಾಸಗಿ ಬ್ಯಾಂಕ್‌ಗಳಿಂದ ಮತ್ತು ಎನ್‌ಬಿಎಫ್‌ಸಿ ಪಾಲು 32% ಆಗಿದೆ.